ADVERTISEMENT

ನರಗುಂದ | ಶಿಕ್ಷಕನಿಂದ ಹಲ್ಲೆ: ವಿದ್ಯಾರ್ಥಿ ಸಾವು, ಬಾಲಕನ ತಾಯಿಯ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:15 IST
Last Updated 19 ಡಿಸೆಂಬರ್ 2022, 22:15 IST
ಭರತ್
ಭರತ್   

ನರಗುಂದ (ಗದಗ ಜಿಲ್ಲೆ): ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ ಸೋಮವಾರ ನಡೆಸಿದ ಹಲ್ಲೆಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ (10) ಸಾವನ್ನಪ್ಪಿದ್ದಾನೆ.

ಬಾಲಕನ ತಾಯಿ ಗೀತಾ ಯಲ್ಲಪ್ಪ ಬಾರಕೇರ ಕೂಡಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದು, ಆರೋಪಿ ಅವರ ಮೇಲೂ ಕಬ್ಬಿಣದ ಸಲಿಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸ
ಲಾಗಿದೆ. ಮುತ್ತಪ್ಪ ಹಡಗಲಿ (ಕುರಿ) ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಮುತ್ತಪ್ಪ ಹಡಗಲಿ ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಗೀತಾ ಅವರ ಮಗ ಭರತ್‌ ಮೇಲೆ ಕಬ್ಬಿಣದ ಸಲಿಕೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಶಾಲೆಯ ಮೊದಲನೇ ಮಹಡಿಯಿಂದ ಆತನನ್ನು ಎತ್ತಿ ಕೆಳಕ್ಕೆ ಎಸೆದಿದ್ದಾನೆ.

ADVERTISEMENT

ಈ ವೇಳೆ ಮಗನನ್ನು ಬಿಡಿಸಲು ಬಂದ ತಾಯಿ ಗೀತಾ ಮೇಲೂ ಹಲ್ಲೆ ನಡೆಸಿದ್ದಾನೆ. ತಡೆಯಲು ಹೋದ ಮತ್ತೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ ಅವರಿಗೂ ಹೊಡೆದಿದ್ದಾನೆ. ಅವರು ನರಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಳಿಕ ಮುಖ್ಯ ಶಿಕ್ಷಕ ಬಿ.ಎಸ್.ಯಾವಗಲ್‌ ಅವರು ಅಂಬುಲೆನ್ಸ್‌ನಲ್ಲಿ ತಾಯಿ, ಮಗನನ್ನು ನರಗುಂದ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.ಸ್ಥಿತಿ ಚಿಂತಾಜನಕವಾಗಿದ್ದರಿಂದ ಇಬ್ಬರನ್ನೂ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿ
ದ್ದರು. ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.

‘ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೋರು ಸಪ್ಪಳವಾದಾಗ ಹೊರ ಬಂದು ನೋಡಿದೆ. ಆಗ ಆರೋಪಿ ನನ್ನ ಮೇಲೂ ಹಲ್ಲೆಗೆ ಮುಂದಾದ. ನಾನು ಹೇಗೋ ಪಾರಾದೆ. ಬಳಿಕ ಆತ ಓಡಿ ಹೋದನು’ ಎಂದು ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ಯಾವಗಲ್ ತಿಳಿಸಿದ್ದಾರೆ.

ಘಟನೆಯಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಶಾಲೆ ತುಂಬೆಲ್ಲಾ ರಕ್ತದ ಕಲೆಗಳಾಗಿದ್ದವು.ಶಿಕ್ಷಕನು ಹಲ್ಲೆ ಮಾಡಿದ್ದನ್ನು ಕಂಡು ಶಾಲೆಯಲ್ಲಿನ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಶಾಲೆಯತ್ತ ಬಂದ ಪೋಷಕರು ದಿಗ್ಭ್ರಮೆವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.