ADVERTISEMENT

ಒಳಮೀಸಲಾತಿ ವರದಿ ಚರ್ಚೆ: ಸಚಿವ ಸಂಪುಟದ ವಿಶೇಷ ಸಭೆ ಆಗಸ್ಟ್ 19ಕ್ಕೆ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2025, 10:48 IST
Last Updated 14 ಆಗಸ್ಟ್ 2025, 10:48 IST
<div class="paragraphs"><p>ವಿಧಾನಸೌಧ (ಸಾಂದರ್ಭಿಕ ಚಿತ್ರ)</p></div>

ವಿಧಾನಸೌಧ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸಲು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಇದೇ 16ರಂದು ನಿಗದಿಯಾಗಿದ್ದ ಸಚಿವ ಸಂಪುಟದ ವಿಶೇಷ ಸಭೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ಆಗಸ್ಟ್‌ 7ರಂದು ನಡೆದಿದ್ದ ಸಂಪುಟ ಸಭೆಯು ಈ ವರದಿಯನ್ನು ಸ್ವೀಕರಿಸಿದೆ. ಅಂದು ವರದಿಯ ಪ್ರತಿಗಳನ್ನು ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ನೀಡಲಾಗಿದೆ. ಎಲ್ಲರೂ ಅಧ್ಯಯನ ಮಾಡಿಕೊಂಡು ಬಂದು ವಿಶೇಷ ಸಂಪುಟ ಸಭೆಯಲ್ಲಿ ಭಾಗವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು.

ADVERTISEMENT

ಈ ಮಧ್ಯೆ, ವರದಿಗೆ ಬಲಗೈ ಸಮುದಾಯದ ಜಾತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರೆ, ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಎಡಗೈ ಜಾತಿಗಳು ಬೀದಿಗಿಳಿದಿವೆ.

ಗೃಹ ಸಚಿವ ಜಿ. ಪರಮೇಶ್ವರ ಅವರ ನಿವಾಸದಲ್ಲಿ ಬುಧವಾರ ರಾತ್ರಿ ನಡೆದ ದಲಿತ ಸಚಿವರ ಸಭೆಯಲ್ಲಿ ಈ ವರದಿಯ ಕುರಿತು ಚರ್ಚೆ ನಡೆದಿದೆ. ಸಚಿವರಾದ ಎಚ್‌.ಸಿ. ಮಹದೇವಪ್ಪ, ಕೆ.ಎಚ್‌. ಮುನಿಯಪ್ಪ ಈ ಸಭೆಯಲ್ಲಿದ್ದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಪರಮೇಶ್ವರ, ‘ಆಯೋಗವು ವರದಿ ಸಲ್ಲಿಸುವ ಮೊದಲೇ ಸಭೆ ಸೇರಿ, ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ ನಾವೆಲ್ಲರೂ ಒಟ್ಟಿಗೆ ಹೋಗಬೇಕೆಂದು ತೀರ್ಮಾನಿಸಿದ್ದೇವೆ. ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮ ಸಭೆ ಸೇರುವ ಬಗ್ಗೆಯೂ ನಿರ್ಧರಿಸಿದ್ದೆವು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅವನ್ನು ಸರಿಪಡಿಸಿಕೊಂಡು ಹೋಗಬೇಕೆಂದು ಬುಧವಾರದ ಸಭೆಯಲ್ಲಿಯೂ ತೀರ್ಮಾನಿಸಿದ್ದೇವೆ’ ಎಂದರು.

‘ವರದಿಯ ಬಗ್ಗೆ ಇನ್ನಷ್ಟು ವಿಷಯಗಳನ್ನು ಆಂತರಿಕವಾಗಿ ಚರ್ಚೆ ಮಾಡಬೇಕಿದೆ. ಹೀಗಾಗಿ, ಸಚಿವ ಸಂಪುಟ ಸಭೆಯನ್ನು ಒಂದೆರಡು ದಿನ ಮುಂದೂಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲು ಕೂಡಾ ಸಭೆಯಲ್ಲಿ ನಿರ್ಧರಿಸಿದ್ದೆವು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.