ADVERTISEMENT

ನಾಗರಾಳ: ಮಂಗಳಮುಖಿಯರ ಸ್ವ–ಉದ್ಯೋಗಕ್ಕೆ ಆರ್ಥಿಕ ನೆರವು

ನಾಗರಾಳ ಎಸ್.ಪಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 5:24 IST
Last Updated 11 ಅಕ್ಟೋಬರ್ 2022, 5:24 IST
ಮಂಗಳಾದೇವಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಸದಸ್ಯರು ಎನ್‌ಆರ್‌ಎಲ್‌ಎಂ ಯೋಜನೆಯಡಿ ನೀಡಿದ ಸಾಲದಲ್ಲಿ ಖರೀದಿಸಿದ ಮೇಕೆ ಹಾಗೂ ನರೇಗಾ ಯೋಜನೆಯಡಿ ನಿರ್ಮಿಸಿದ ಮೇಕೆ ಶೆಡ್
ಮಂಗಳಾದೇವಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಸದಸ್ಯರು ಎನ್‌ಆರ್‌ಎಲ್‌ಎಂ ಯೋಜನೆಯಡಿ ನೀಡಿದ ಸಾಲದಲ್ಲಿ ಖರೀದಿಸಿದ ಮೇಕೆ ಹಾಗೂ ನರೇಗಾ ಯೋಜನೆಯಡಿ ನಿರ್ಮಿಸಿದ ಮೇಕೆ ಶೆಡ್   

ಗುಳೇದಗುಡ್ಡ: ತಾಲ್ಲೂಕಿನ ನಾಗರಾಳ ಎಸ್.ಪಿ ಗ್ರಾಮದಲ್ಲಿ ತೃತೀಯ ಲಿಂಗಿಗಳನ್ನು ಸ್ವಸಹಾಯ ಸಂಘದ ಸದಸ್ಯರನ್ನಾಗಿಸಿ, ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಿರುವ ಜಿಲ್ಲಾ ಪಂಚಾಯಿತಿ, ಅವರು ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಟ್ಟಿದೆ.

ಸಂಘದಲ್ಲಿ ಇಂತಹ 20 ಸದಸ್ಯರಿದ್ದು, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಅವರು ಸಾಲವನ್ನೂ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ.

ಬಾಗಲಕೋಟೆ ಜಿ.ಪಂ ಸಿಇಒ ಟಿ. ಬೂಬಾಲನ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿರ್ವಹಣೆ ಮಿಷನ್‌ (ಎನ್‌ಆರ್‌ಎಲ್‌ಎಂ) ತಾಲ್ಲೂಕು ಪ್ರೋಗ್ರಾಮರ್ ಗುರುಲಿಂಗಯ್ಯ ಗೌಡರ ಅವರು ಜಿಲ್ಲಾ ಪಂಚಾಯಿತಿಯಲ್ಲಿ ತೃತೀಯಲಿಂಗಿಗಳ ಸಭೆ ನಡೆಸಿ, ನಾಗರಾಳ ಎಸ್.ಪಿ ಗ್ರಾಮದಲ್ಲಿ ತೃತೀಯ ಲಿಂಗಿಗಳ ಮನವೊಲಿಸಿ ಅವರದ್ದೇ ಮಂಗಳಾದೇವಿ ಸ್ತ್ರೀಶಕ್ತಿ ಸ್ವ ಸಹಾಯ ಸಂಘವನ್ನು ರಚಿಸಿದರು. ಬ್ಯಾಂಕ್ ಖಾತೆ ಸಹ ತೆರೆದ ಅವರು ಎನ್‌ಆರ್‌ಎಲ್‌ಎಂ ಯೋಜನೆಯಡಿ ಕಮ್ಯುನಿಟಿ ಬಂಡವಾಳ ನಿಧಿಯಾಗಿ ₹ 1.50 ಲಕ್ಷವನ್ನು ಶೂನ್ಯ ಬಡ್ಡಿ ದರದಲ್ಲಿ ಕಳೆದ ಮೇ ತಿಂಗಳಲ್ಲಿ ನೀಡಿದ್ದಾರೆ.

ADVERTISEMENT

ಆಗಿನ ಬಾಗಲಕೋಟೆಯ ಯೋಜನಾ ಅಭಿವೃದ್ಧಿ ಅಧಿಕಾರಿ ಎಂ.ವಿ. ಚಳಗೇರಿ ಅವರೇ ಖುದ್ದಾಗಿ ಸಂಘದ ಸದಸ್ಯರಿಗೆ ಮೇಕೆಗಳನ್ನು ಖರೀದಿಸಿ ಕೊಟ್ಟಿದ್ದರು. ಪಶು ಇಲಾಖೆಯಿಂದ ಎಲ್ಲ ಮೇಕೆಗಳಿಗೆ ವಿಮೆ ಮಾಡಿಸಲಾಗಿದೆ. ಮೇಕೆ ಸಾಕಾಣಿಕೆಗೆ ಬೇಕಾದ ಶೆಡ್‌ ಅನ್ನು ನರೇಗಾ ಯೋಜನೆಯಡಿ ₹ 68 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಾಲ್ಕು ಶೆಡ್‌ಗಳ ನಿರ್ಮಾಣ ಪೂರ್ಣಗೊಂಡಿದೆ.

*

ರಾಜ್ಯದಲ್ಲಿ ಮೊದಲ ಸಲ ಪ್ರಾಯೋಗಿಕ ಯೋಜನೆಯಾಗಿ ನಾಗರಾಳ ಗ್ರಾಮ ಪಂಚಾಯಿತಿಯ ನಾಗರಾಳ ಎಸ್.ಪಿ ಗ್ರಾಮದ ಮಂಗಳಮುಖಿಯರ ಸ್ವ ಸಹಾಯ ಸಂಘಕ್ಕೆ ಮೇಕೆ ಸಾಕಾಣಿಕೆಗೆ ಆರ್ಥಿಕ ನೆರವು ನೀಡಲಾಗಿದೆ
-ಸತೀಶ ನಾಯಕ, ಗುಳೇದಗುಡ್ಡ ತಾ.ಪಂ ಇಒ

*

ಮೇಕೆ ಸಾಕಾಣಿಕೆಗೆ ಸಾಲ ನೀಡಿರುವುದರಿಂದ ನಮ್ಮ ಜೀವನಕ್ಕೆ ನೆಲೆ ಸಿಕ್ಕಂತಾಗಿದೆ. ಇನ್ನಷ್ಟು ಸೌಲಭ್ಯ ನೀಡಬೇಕು, ಸಾಲವನ್ನು ಸರಿಯಾಗಿ ಕಟ್ಟುತ್ತೇವೆ
-ಯಮನಪ್ಪ ಮಲ್ಲಪ್ಪ ಚಿಕ್ಕದ್ಯಾವಪ್ಪನವರ, ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.