ADVERTISEMENT

ನಾಗಸಂದ್ರ ಟೋಲ್‌ ಸಂಗ್ರಹ: ಕೇಂದ್ರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:56 IST
Last Updated 22 ಜುಲೈ 2025, 23:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಒಳಪಡುವ ನಾಗಸಂದ್ರ ಟೋಲ್‌ ಕೇಂದ್ರದಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಿರುವ ಟೋಲ್‌ (ಸುಂಕ) ತಡೆಯಲು ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್‌ಎಐ) ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ನ ಹಿರಿಯ ವಕೀಲ ಎ.ವಿ.ಅಮರನಾಥನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಾದ ಮಂಡಿಸಿದ ಅಮರನಾಥನ್‌, ‘ನಾಗಸಂದ್ರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಾಜ್ಯದ ಸುಮಾರು 20 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಇಲ್ಲಿಂದ ಹಾದು ಹೋಗುವ ಪ್ರತಿಯೊಂದು ವಾಹನಕ್ಕೂ ಫಾಸ್ಟ್‌ ಟ್ಯಾಗ್‌ಗಳ ಮೂಲಕ ಪ್ರತಿದಿನ ಲಕ್ಷಾಂತರ ರೂಪಾಯಿಗಳನ್ನು ಸುಂಕದ ರೂಪದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಒಪ್ಪಂದದ ಅವಧಿ 2021ರಲ್ಲಿಯೇ ಮುಗಿದಿದೆ’ ಎಂದರು.

ADVERTISEMENT

‘ಯಶವಂತಪುರದಿಂದ ನಾಗಸಂದ್ರ ಕಡೆಗೆ ಹೋಗುವ ಫ್ಲೈಓವರ್‌ ಕೇವಲ 5 ಕಿಲೋ ಮೀಟರ್‌ ದೂರದಲ್ಲಿದೆ ಮತ್ತು ಬೃಹತ್‌ ಬೆಂಗಳೂರು ಮಹಾನಗರದ ವ್ಯಾಪ್ತಿಯೊಳಗೇ ಇದೆ. ನಗರದೊಳಗೆ ಟೋಲ್‌ ಸಂಗ್ರಹ ಕಾನೂನುಬಾಹಿರ, ಅನಿಯಂತ್ರಿತ ಮತ್ತು ಅನಧಿಕೃತ’ ಎಂದು ಪ್ರತಿಪಾದಿಸಿದರು.

ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಹೆದ್ದಾರಿ ಸಾರಿಗೆ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ಎನ್ಎಚ್‌ಎಐ ಅಧ್ಯಕ್ಷರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿತು.

ಕೋರಿಕೆ ಏನು?: ‘ಟೋಲ್‌ ಸಂಗ್ರಹಕ್ಕೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರ ಮತ್ತು ಎನ್‌ಎಚ್‌ಎಐಗೆ ನಿರ್ದೇಶಿಸಬೇಕು ಮತ್ತು 2021ರಿಂದ ಈವರೆಗೆ ನಾಗಸಂದ್ರ ಟೋಲ್‌ ಪ್ಲಾಜಾದಲ್ಲಿ ಸಂಗ್ರಹ ಮಾಡಿರುವ ಟೋಲ್‌ ಶುಲ್ಕದ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಆರ್‌ಟಿಐ ವ್ಯಾಪ್ತಿಗೆ ಸೆಂಚುರಿ ಕ್ಲಬ್‌: ಹೈಕೋರ್ಟ್‌‌

‘ನಗರದ ಪ್ರತಿಷ್ಠಿತ ಸೆಂಚುರಿ ಕ್ಲಬ್ ಸಾರ್ವಜನಿಕ ಪ್ರಾಧಿಕಾರ. ಇದು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ’ ಎಂಬ ಮಾಹಿತಿ ಆಯೋಗದ ಆದೇಶವನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ. ‘ಸೆಂಚುರಿ ಕ್ಲಬ್​ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ ಎಂಬ ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಸೆಂಚುರಿ ಕ್ಲಬ್​ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಅರ್ಜಿದಾರರ ಪರ ವಕೀಲರು ‘ಕ್ಲಬ್​ಗೆ ಮೈಸೂರು ಮಹಾರಾಜರು 7.5 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ ಎಂಬ ಕಾರಣಕ್ಕೆ ಗಣನೀಯ ಹಣಕಾಸು ದೊರೆತಿದೆ ಎಂದು ಹೇಳಲಾಗುವುದಿಲ್ಲ. ಗಣನೀಯ ಅನುದಾನ ಪಡೆಯದ ಹೊರತು ಅದನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಹೇಳಲಾಗದು. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರು ಕ್ಲಬ್​ಗೆ ಪೋಷಕ ಮುಖ್ಯಸ್ಥರಾಗಿದ್ದರು. ಈ ಪೋಷಕ ಮುಖ್ಯಸ್ಥರು ನೀಡಿರುವ ದಾನವನ್ನು ಸರ್ಕಾರದ ಅನುದಾನ ಎನ್ನಲಾಗುವುದಿಲ್ಲ. ಆದ್ದರಿಂದ ಮಾಹಿತಿ ಆಯೋಗದ ಆದೇಶ ರದ್ದು ಮಾಡಬೇಕು’ ಎಂದು ಕೋರಿದ್ದರು. ಇದನ್ನು ತಳ್ಳಿ ಹಾಕಿರುವ ನ್ಯಾಯಪೀಠ ‘ಮಹಾರಾಜರು ಮಂಜೂರು ಮಾಡಿದ ಜಾಗದಲ್ಲೇ ಕ್ಲಬ್‌ ನಡೆಯುತ್ತಿದೆ. ಈ ಜಮೀನು ಇಲ್ಲವಾದಲ್ಲಿ ಕ್ಲಬ್ ಅಸ್ತಿತ್ವವೇ ಇರುವುದಿಲ್ಲ. ಹೀಗಾಗಿ ಇದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದೆ. ಮಾಹಿತಿ ಆಯೋಗದ ಆದೇಶದಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.