ADVERTISEMENT

ಮುಂದಿನ ದಿನಗಳ ರಾಜಕೀಯ ವಿದ್ಯಮಾನ ಕಾದುನೋಡಿ: ಕಟೀಲ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 1:17 IST
Last Updated 18 ಫೆಬ್ರುವರಿ 2020, 1:17 IST
   

ಮೈಸೂರು:ನಾವು ಆಪರೇಷನ್ ಕಮಲ ಮಾಡೋದಿಲ್ಲ.ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಮುಂದಿನ ರಾಜಕೀಯ ವಿದ್ಯಮಾನಗಳನ್ನು ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.

ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಡನೆ ಮಾತನಾಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರು ಬೆಂಬಲ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾವು ಯಾರನ್ನು ಬಿಜೆಪಿಗೆ ಬರುವಂತೆ ಹೇಳಿಲ್ಲ.ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಹೊರತು ಬೇರೇನೂ ಇಲ್ಲ.ಹಾಗಂತ ನಾವು ಆಪರೇಷನ್ ‌ಕಮಲ ಮಾಡಲ್ಲ ಎಂದು ಹೇಳಿದರು.

ADVERTISEMENT

ಜೆಡಿಎಸ್ ಶಾಸಕರು ಮತ್ತೊಂದು ಸುತ್ತಿನಲ್ಲಿ ಬರುವರೇ ಅನ್ನುವ ಪ್ರಶ್ನೆಗೆ ಮುಂದಿನ ರಾಜಕೀಯ ವಿದ್ಯಮಾನ ಕಾದು ನೋಡಿ ಅಂತ ಉತ್ತರಿಸಿದರು.

ದೇಶದ್ರೋಹಿ ಘೋಷಣೆ ಕೂಗಿದವರು ಯಾರೇ ಆಗಿದ್ದರೂ ತಪ್ಪೇ.ಅಂತಹವರಿಗೆ ಶಿಕ್ಷೆಯಾಗಬೇಕು. ದೇಶದ್ರೋಹಿ ಘೋಷಣೆ ಕೂಗಿದವರನ್ನು ಯಾಕೇ ಬಿಟ್ಟಿದ್ದಾರೆಂದು ಗೊತ್ತಿಲ್ಲ.ಈ ಬಗ್ಗೆ ತನಿಖೆ ನಡೆಯುತ್ತಿದೆ.ದೇಶವಿರೋಧಿ ಘೋಷಣೆ ಕೂಗುವ ವಿಚಾರದಲ್ಲಿ ಹಿಂದೂ ಮುಸ್ಲಿಂ ಅನ್ನುವಂತೆ ಬರಲ್ಲ ಎಂದರು.

ಮೀಸಲಾತಿ ಮೂಲಭೂತ ಹಕ್ಕಲ್ಕವೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದು, ತಾವು ಮೇಲ್ಮನವಿ ಸಲ್ಲಿಸುವ ವಿಚಾರದಲ್ಲಿ ಬಿಜೆಪಿ ನಿಲುವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಟೀಲ್ ಅವರ ಕೆಲಸ ಅವರು ಮಾಡಲಿ,ನಮ್ಮದು ನಾವು ಮಾಡುತ್ತೇವೆ. ನಾವು ಏನು ಮಾಡಬೇಕು ಅದನ್ನು ಮಾಡಲಿದ್ದೇವೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಲ್ಕು ಜನರು ಸಲಹೆಗಾರರಾಗಿ ನೇಮಕ ಮಾಡುತ್ತಿರುವ ಕುರಿತು ಪಕ್ಷದೊಳಗೆ ಪತ್ರ ವ್ಯವಹಾರ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ ಈ ಬಗ್ಗೆ ನನಗೇನೂ ಗೊತ್ತಿಲ್ಲ. ಈ
ಕುರಿತಂತೆ ಮಾಹಿತಿ ಇಲ್ಲ ಎಂದು ನಿರಾಕರಿಸಿದರು.

ಉಳಿದಂತೆ ಮಾಧ್ಯಮದವರು ಕೇಳಿದ ಯಾವ ಪ್ರಶ್ನೆಗೂ ಉತ್ತರಿಸಲು ಬಯಸಲಿಲ್ಲ.

ಇದಕ್ಕೂ ಮೊದಲು ಸಮಾರಂಭಕ್ಕೆ ಆಗಮಿಸಿದ ಕಟೀಲ್ ಅವರನ್ನು ಕಾರ್ಯಕರ್ತರು ಭರ್ಜರಿಯಾಗಿ ಬರಮಾಡಿಕೊಂಡರು.ಪಟಾಕಿ ಸಿಡಿಸಿ ಹಾರ ತುರಾಯಿ ಹಾಕಿ ಸ್ವಾಗತಿಸಿದರು.

ಸಂಸದ ಪ್ರತಾಪಸಿಂಹ,ಮಾಜಿ ಸಂಸದ ಸಿ.ಎಚ್. ವಿಜಯಶಂಕರ್,ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್ ಇನ್ನಿತರರು ಇದ್ದರು.

ಅಧಿಕಾರ ಹಸ್ತಾಂತರ: ಮೈಸೂರು ನಗರ ಜಿಲ್ಲಾಧ್ಯಕ್ಷರಾಗಿ ಟಿ.ಎಸ್. ಶ್ರೀವತ್ಸ,ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಎಸ್. ಡಿ.ಮಹೇಂದ್ರ ಅವರಿಗೆ ನಿರ್ಗಮಿತ ಅಧ್ಯಕ್ಷರಾದ ಡಾ.ಬಿ.ಎಚ್.ಮಂಜುನಾಥ್, ಕೋಟೆ ಎಂ.ಶಿವಣ್ಣ ಅವರು ಪಕ್ಷದ ಬಾವುಟ ಹಸ್ತಾಂತರ ಮಾಡಿ ಅಧಿಕಾರ ವಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.