ADVERTISEMENT

ಫ್ರೀ ಕಾಶ್ಮೀರ ವಿವಾದ: ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಕ್ಕೆ ನಳಿನಿ ಕ್ಷಮೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 11:08 IST
Last Updated 15 ಜನವರಿ 2020, 11:08 IST
ಮೈಸೂರಿನ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಬಿ. ನಳಿನಿ
ಮೈಸೂರಿನ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ಬಿ. ನಳಿನಿ   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದ ಬಿ.ನಳಿನಿ ಅವರು ಮಂಗಳವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮದವರತ್ತ ಕಿಡಿಕಾರಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಹೀಗೆ ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.

‘ನಾನಿರುವ ಪರಿಸ್ಥಿತಿ ನನ್ನನ್ನು ಈ ರೀತಿ ವರ್ತಿಸುವಂತೆ ಮಾಡಿತು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ನಾನು ನನ್ನನ್ನು ಬದಲಾಯಿಸಿಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯುತ ನಡವಳಿಕೆ ಹೊಂದಲು ಪ್ರಯತ್ನಿಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಜ. 8ರಂದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಬಿ.ನಳಿನಿ ‘ಫ್ರೀ ಕಾಶ್ಮಿರ’ ಎಂಬ ಫಲಕ ಪ್ರದರ್ಶಿಸಿ ವಿವಾದಕ್ಕೀಡಾಗಿದ್ದರು.

ನಂತರ, ಇವರು ಮತ್ತು ಆಯೋಜಕರ ವಿರುದ್ಧ ಸ್ವಯಂಪ್ರೇರಿತವಾಗಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ವಕೀಲರ ಸಂಘವು ಇವರ ಪರ ವಕಾಲತ್ತು ವಹಿಸಬಾರದು ಎಂದು ನಿರ್ಣಯ ಕೈಗೊಂಡಿತು. ನಳಿನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಮಂಗಳವಾರ ನ್ಯಾಯಾಲಯದಲ್ಲಿ ಪೊಲೀಸರು ಆಕ್ಷೇಪ ಸಲ್ಲಿಸಬೇಕಿತ್ತು. ಈ ವೇಳೆ ಅವರು ನ್ಯಾಯಾಲಯದ ಆವರಣದಲ್ಲಿ ಮಾಧ್ಯಮದವರತ್ತ ಕಿಡಿಕಾರಿದ್ದರು. ‘ನೋ ಹ್ಯುಮಾನಿಟಿ’ ಎಂದು ಘೋಷಣೆ ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.