ADVERTISEMENT

ನ್ಯಾಯಾಂಗ-ಅರೆ ನ್ಯಾಯಿಕ ಸಂಸ್ಥೆಗಳಲ್ಲಿ ಕನ್ನಡಕ್ಕೆ ಕುತ್ತು: ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 8:00 IST
Last Updated 22 ಮಾರ್ಚ್ 2022, 8:00 IST

ಬೆಂಗಳೂರು: 'ರಾಜ್ಯದ ನ್ಯಾಯಾಂಗ ಮತ್ತು ಅರೆ ನ್ಯಾಯಿಕ ಸಂಸ್ಥೆಗಳಲ್ಲಿನ ನಾಮಫಲಕಗಳು ಕಡ್ಡಾಯವಾಗಿ ಕನ್ನಡ ಪದಗಳಲ್ಲಿಯೇ ಇರಬೇಕು ಮತ್ತು ಇಂಗ್ಲಿಷ್‌ನಲ್ಲಿರುವ ಫಲಕಗಳನ್ನು ಸೂಕ್ತ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿ ಹಾಕಲು ಕ್ರಮ ಕೈಗೊಳ್ಳಬೇಕು' ಎಂದು ಹೈಕೋರ್ಟ್ ವಕೀಲ ಧರಣೇಶ್ ಎನ್.ಕೃಷ್ಣಾಪುರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಅವರು; 'ತಾಯಿ ಭಾಷೆ ಉಳಿದರೆ ಮಾತ್ರ ಈ ನಾಡಿನ ಜನಸಾಮಾನ್ಯ ಮತ್ತು ಆತನಲ್ಲಿನ ಅಂತಃಸತ್ವ ಉಳಿಯಲು ಸಾಧ್ಯ' ಎಂದು ಹೇಳಿದ್ದಾರೆ‌.

'ರಾಜ್ಯದ ನ್ಯಾಯಾಂಗ ಮತ್ತು ಅರೆ ನ್ಯಾಯಾಂಗ ಸಂಸ್ಥೆಗಳು ಅಲ್ಲಿನ ನ್ಯಾಯಾಂಗ ಅಧಿಕಾರಿಗಳ, ಸಿಬ್ಬಂದಿ ಹುದ್ದೆಯ ಸ್ಥಾನಮಾನದ ನಾಮಫಲಕಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ. ಆದರೆ, ಅಂತಹ ನಾಮಫಲಕಗಳ ಕೆಳಗೆ ಅವುಗಳಿಗೆ ಸಮಾನಾರ್ಥಕವಾದ ಕನ್ನಡ ಪದಗಳನ್ನು ಬಳಸದೆ, ಅವುಗಳನ್ನೂ ಇಂಗ್ಲಿಷ್‌ನಲ್ಲಿಯೇ ಬರೆಯಿಸಿರುವುದು ಕಂಡು ಬರುತ್ತಿದೆ. ಇದರಿಂದ ವಕೀಲರು ಮತ್ತು ಜನಸಾಮಾನ್ಯರು ನ್ಯಾಯಾಂಗಾಧಿಕಾರಿಗಳ ಹುದ್ದೆಗಳನ್ನು ಸೂಕ್ತ ರೀತಿಯಲ್ಲಿ ಕನ್ನಡದಲ್ಲಿ ಉಲ್ಲೇಖಿಸಿ ಪತ್ರ ಬರೆಯಲು ಸಾಧ್ಯವಾಗುತ್ತಿಲ್ಲ. ಇದೊಂದು ಶೋಚನೀಯ ಸಂಗತಿ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

'ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯಾಗಿದ್ದು, ಕೂಡಲೇ ರಾಜ್ಯದ ಎಲ್ಲಾ ನ್ಯಾಯಾಂಗ ಮತ್ತು ಅರೆ ನ್ಯಾಯಾಂಗ ಸಂಸ್ಥೆಗಳಲ್ಲಿನ ಎಲ್ಲಾ ಬಗೆಯ ನಾಮಫಲಕಗಳು ಕನ್ನಡ ಭಾಷೆಯಲ್ಲೇ ಇರಬೇಕು. ಇಂಗ್ಲಿಷ್‌ನಲ್ಲಿರುವ ಫಲಕಗಳ ಕೆಳಗೆ ಕನ್ನಡದ ಅರ್ಥ ಸೂಕ್ತವಾಗಿರಬೇಕು. ಈ ಕೆಲಸ ಕಾಲಮಿತಿಯೊಳಗೆ ನಡೆಯುವಂತೆ ನೋಡಿಕೊಳ್ಳಬೇಕು' ಎಂದು ಧರಣೇಶ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.