ಬೆಂಗಳೂರು: ನಮ್ಮ ಮೆಟ್ರೊ ‘ಹಳದಿ ಮಾರ್ಗ’ ಹಾಗೂ ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ.
ಹಳದಿ ಮಾರ್ಗವು ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ತಾಣ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗದ ಮೂಲಕ ಹಾದುಹೋಗಲಿದೆ. 19.15 ಕಿ.ಮೀ ಉದ್ದವಿರುವ ನಮ್ಮ ಮೆಟ್ರೊ ‘ಹಳದಿ ಮಾರ್ಗ’ದಲ್ಲಿ ಒಟ್ಟು 16 ನಿಲ್ದಾಣಗಳಿವೆ.
ಇದೇ ವೇಳೆ ಪ್ರಧಾನಿ ಮೋದಿ ಅವರು ಮೆಟ್ರೊ 3ನೇ ಹಂತದ ಶಂಕುಸ್ಥಾಪನೆ ಕೂಡ ನೆರವೇರಿಸಿದರು.
ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಈ ದಿನ ಪ್ರಮುಖವಾಗಿದ್ದು, ಈ ಕುರಿತು ಹಲವು ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದ ಮಹಾಜನರ ಬಹುನಿರೀಕ್ಷಿತವಾಗಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಇಂದು ಲೋಕಾರ್ಪಣೆ ಮಾಡಿದರು. ಅವರ ದೂರದೃಷ್ಟಿ ಹಾಗೂ ಸಶಕ್ತ ನೇತೃತ್ವದಲ್ಲಿ ಭಾರತವು ಸಂಚಾರ ವ್ಯವಸ್ಥೆಯಲ್ಲಿ ಸದೃಢವಾಗುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಕೂಡ ಇದರಲ್ಲಿ ಭಾಗವಾಗುತ್ತಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ. ‘ನಮ್ಮ ಮೆಟ್ರೊ’ ಬೆಂಗಳೂರು ನಗರದ ಆರ್ಥಿಕ, ಕೈಗಾರಿಕಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ’ ಎಂದಿದ್ದಾರೆ.
‘ಬೆಂಗಳೂರಿಗರ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂಡಿ ಇಂದು ಲೋಕಾರ್ಪಣೆಗೊಳಿಸಿದೆ. 7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್.ವಿ ರಸ್ತೆ - ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಕಾರ್ಯಾಚರಣೆ ಮಾಡಲಿವೆ. ಬೆಂಗಳೂರಿನ ಉದ್ದಗಲಕ್ಕೂ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡುವ ಮೂಲಕ ಸಂಚಾರ ದಟ್ಟಣೆ ತಗ್ಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಈ ದಿನವು ಐತಿಹಾಸಿಕ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಮೆಟ್ರೊ ‘ಹಳದಿ ಮಾರ್ಗ’ದ ಉದ್ಘಾಟನೆ, ಮೆಟ್ರೊ 3ನೇ ಹಂತದ ಶಂಕು ಸ್ಥಾಪನೆ ಹಾಗೂ ಬೆಂಗಳೂರು–ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಮೂಲಕ ಕರ್ನಾಟಕದ ಅಭಿವೃದ್ದಿಗೆ ಕಾರಣವಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ‘ಹಳದಿ ಮಾರ್ಗ’ ಹಾಗೂ ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ. ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಗಳಿಗೆ ಹಾಗೂ ಇಂದಿನ ಬಹುಮುಖ್ಯ ಸಂಚಾರ ಸೌಲಭ್ಯಗಳಿಗೆ ಚಾಲನೆ ನೀಡಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.