ADVERTISEMENT

ನಂದಿನಿ ತುಪ್ಪದ ಬೆಲೆ ಕೆ.ಜಿ.ಗೆ ₹90ರಷ್ಟು ಹೆಚ್ಚಳ: ಜೆಡಿಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 16:15 IST
Last Updated 7 ನವೆಂಬರ್ 2025, 16:15 IST
ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ವೇಳೆ ‘ತೆರಿಗೆ ಪಿಪಾಸು ಸರ್ಕಾರ’ ಪ್ರತಿಕೃತಿಗೆ ಬೆಂಕಿ ಹಚ್ಚಿದರು 
ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ವೇಳೆ ‘ತೆರಿಗೆ ಪಿಪಾಸು ಸರ್ಕಾರ’ ಪ್ರತಿಕೃತಿಗೆ ಬೆಂಕಿ ಹಚ್ಚಿದರು    

ಬೆಂಗಳೂರು: ನಂದಿನಿ ತುಪ್ಪದ ಬೆಲೆಯನ್ನು ಕೆ.ಜಿ.ಗೆ ₹90ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಬೆಂಗಳೂರು ಘಟಕವು ಶುಕ್ರವಾರ ಪ್ರತಿಭಟನೆ ನಡೆಸಿತು.

ಪಕ್ಷದ ಬೆಂಗಳೂರು ನಗರದ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಅವರ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಕಾರ್ಯಕರ್ತರು, ಇದು ‘ತೆರಿಗೆ ಪಿಪಾಸು ಸರ್ಕಾರ’ ಎಂದು ಘೋಷಣೆ ಕೂಗಿದರು. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರಮೇಶ್‌ಗೌಡ, ‘ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಅವುಗಳನ್ನು ನೀಡಲಾಗದೆ ರಾಜ್ಯವನ್ನು ದಿವಾಳಿ ಮಾಡಿದೆ. ಖಾಲಿಯಾಗಿರುವ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ’ ಎಂದರು.

ADVERTISEMENT

‘ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮದ್ಯದ ದರ, ನೀರಿನ ಶುಲ್ಕ, ಪೆಟ್ರೋಲ್‌–ಡೀಸೆಲ್‌ ಮೇಲಿನ ತೆರಿಗೆ, ವಿದ್ಯುತ್ ಶುಲ್ಕ ಎಲ್ಲವನ್ನೂ ಏರಿಕೆ ಮಾಡಿದೆ. ಈಗ ನಂದಿನಿ ತುಪ್ಪದ ಬೆಲೆಯನ್ನೂ ಹೆಚ್ಚಿಸಿದೆ. ಬೆಲೆ ಏರಿಕೆಯನ್ನು ಹಿಂಪಡೆಯದೆ ಇದ್ದರೆ, ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಕಾರ್ಯಕರ್ತರು ಪ್ರತಿಭಟನೆ ವೇಳೆ ‘ತೆರಿಗೆ ಪಿಪಾಸು ಸರ್ಕಾರ’ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ರಸ್ತೆಯಲ್ಲಿ ಮೆರವಣಿಗೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.