ADVERTISEMENT

‘ಬಿಜೆಪಿ ಅವಧಿಯಲ್ಲಿ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ’

ಕೆಎಂಎಫ್‌ ಅಧ್ಯಕ್ಷ ಭೀಮ ನಾಯ್ಕ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 2:01 IST
Last Updated 4 ಆಗಸ್ಟ್ 2023, 2:01 IST
ನಂದಿನಿ ಶುದ್ಧ ತುಪ್ಪ
ನಂದಿನಿ ಶುದ್ಧ ತುಪ್ಪ   

ಬೆಂಗಳೂರು: ‘ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರುಪತಿ ತಿರುಮಲ ದೇವಸ್ಥಾನಕ್ಕೆ (ಟಿಟಿಡಿ) ಲಡ್ಡು ತಯಾರಿಸಲು ನಂದಿನಿ ತುಪ್ಪ ಪೂರೈಸಿರಲಿಲ್ಲ. ಹಾಗಿದ್ದರೆ ಅದು ಹಿಂದೂ ವಿರೋಧಿ ಸರ್ಕಾರವೇ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮ ನಾಯ್ಕ ಪ್ರಶ್ನಿಸಿದ್ದಾರೆ.

‘2020-21 ಹಾಗೂ 2022-23ನೇ ಸಾಲಿನಲ್ಲಿ ಟೆಂಡರ್ ಪ್ರಕ್ರಿಯೆ ವೇಳೆ ತೀವ್ರ ಸ್ಪರ್ಧೆ ಏರ್ಪಟ್ಟ ಕಾರಣ ಒಂದು ಲೀಟರ್‌ನಷ್ಟು ನಂದಿನಿ ತುಪ್ಪವನ್ನೂ ತಿರುಪತಿ ತಿರುಮಲ ದೇವಸ್ಥಾನಕ್ಕೆ ಪೂರೈಸಿರಲಿಲ್ಲ. ಈ ಎರಡು ವರ್ಷಗಳಲ್ಲಿ  ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು’ ಎಂದು ಟ್ವೀಟ್‌ ಮಾಡಿದ್ದಾರೆ.

ತಿರುಪತಿ– ತಿರುಮಲ ದೇವಸ್ಥಾನಕ್ಕೆ (ಟಿಟಿಡಿ) ನಂದಿನಿ ತುಪ್ಪ ಸರಬರಾಜಿಗೆ ಸಂಬಂಧಿಸಿದಂತೆ ವಿವರಿಸಿರುವ ಅವರು, ‘ಕಳೆದ 20 ವರ್ಷಗಳಿಂದಲೂ ಕೆಎಂಎಫ್ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಕೆಗೆ ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟ ಕಾರಣ ನಂದಿನಿ ತುಪ್ಪದ ಉತ್ಪಾದನಾ ವೆಚ್ಚವೂ ನಮಗೆ ದೊರಕುವುದು ತುಂಬಾ ಕಷ್ಟಕರವಾಗಿದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಹೀಗಿದ್ದರೂ 2021-22ನೇ ಸಾಲಿನ ಟೆಂಡರ್ ಪ್ರಕ್ರಿಯೆಯಲ್ಲಿ ‘ಎಲ್‌-3’ ಸ್ಪರ್ಧೆದಾರರಾದರೂ ದೇವಾಲಯದಿಂದ 1,000 ಮೆಟ್ರಿಕ್‌ ಟನ್ ತುಪ್ಪಕ್ಕೆ ಬೇಡಿಕೆ ಇತ್ತು. ಆದ್ದರಿಂದ, 345 ಮೆಟ್ರಿಕ್ ಟನ್‌ನಷ್ಟು ನಂದಿನಿ ತುಪ್ಪವನ್ನು ಪ್ರತಿ ಲೀಟರ್‌ಗೆ ₹392ಗಳಂತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ನಂದಿನಿ ತುಪ್ಪದ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ರಾಜ್ಯದ ರೈತರಿಗೆ  ನ್ಯಾಯ ದೊರೆಯುವುದೇ’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.