ADVERTISEMENT

ನರೇಗಾ: ಕೇಂದ್ರದಿಂದ ₹ 2,784 ಕೋಟಿ ಬಾಕಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 2:14 IST
Last Updated 3 ಜನವರಿ 2020, 2:14 IST
   

ಬೆಂಗಳೂರು: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ (ನರೇಗಾ) ಕೇಂದ್ರವು ರಾಜ್ಯಕ್ಕೆ ₹ 2,784 ಕೋಟಿ ನೀಡುವುದು ಬಾಕಿ ಉಳಿದಿದ್ದು, ರಾಜ್ಯವು ಒತ್ತಡ ತಂತ್ರ ಮುಂದುವರಿಸಿದೆ.

ಕೇಂದ್ರದ ಹಣ ಪಾವತಿಯಾಗದ ಕಾರಣ ಕಾರ್ಮಿಕರಿಗೆ ಮೂರು ತಿಂಗಳ ಸಂಬಳ ನೀಡುವುದು ಬಾಕಿ ಉಳಿದಿದೆ. ಪ್ರತಿ ದಿನ 5 ಲಕ್ಷ ಮಾನವ ದಿನವನ್ನು ಸೃಷ್ಟಿಸುವ ಗುರಿ ಇದ್ದರೂ, ಸದ್ಯ 1.60 ಲಕ್ಷ ಮಾನವ ದಿನ ಮಾತ್ರ ಸೃಷ್ಟಿಯಾಗುತ್ತಿದೆ.

‘ಅಕ್ಟೋಬರ್‌ನಿಂದ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಇದರಿಂದಾಗಿ ಯೋಜನೆಯು ಮಂದಗತಿಯಿಂದ ಸಾಗುವಂತಾಗಿದೆ. ಪ್ರವಾಹದಿಂದಾಗಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಕೃಷಿ ಚಟುವಟಿಕೆ ಕುಂಠಿತವಾಗಿದ್ದು ಸಹ ಅಡ್ಡಿಯಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಹೇಳಿದರು.

ADVERTISEMENT

ಉದ್ಯೋಗ ಖಾತರಿಯ ಬಾಕಿ ಹಣವನ್ನು ಪಾವತಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಕ್ಟೋಬರ್‌ 20ರಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದೆ. ಇದರಿಂದ ಹಣ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರ ₹ 803 ಕೋಟಿಯನ್ನು ತನ್ನ ನಿಧಿಯಿಂದಲೇ ಪಾವತಿಸಿತ್ತು. ಕೇಂದ್ರ ಅದನ್ನೂ ನೀಡುವುದು ಬಾಕಿ ಉಳಿದಿದೆ.

2018–19ರಲ್ಲಿ ರಾಜ್ಯದಲ್ಲಿ 10.45 ಕೋಟಿ ಮಾನವ ದಿನಗಳು ಸೃಷ್ಟಿಯಾಗಿದ್ದವು. ಈ ವರ್ಷ 12 ಕೋಟಿ ಮಾನವ ದಿನಗಳ ಪೈಕಿ ಇದುವರೆಗೆ 8.77 ಕೋಟಿ ಮಾನವ ದಿನಗಳಷ್ಟೇ ಸೃಷ್ಟಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.