ADVERTISEMENT

ಕೋವಿಡ್‌ ಹೆಚ್ಚಳ: ‘ನರೇಗಾ’ಕ್ಕೆ ಕುತ್ತು, 1.26 ಕೋಟಿ ಮಾನವ ದಿನ ನಷ್ಟ ಸಾಧ್ಯತೆ

ರಾಜೇಶ್ ರೈ ಚಟ್ಲ
Published 11 ಮೇ 2021, 20:06 IST
Last Updated 11 ಮೇ 2021, 20:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಮೇಲೂ ಪರಿಣಾಮ ಬೀರಿದ್ದು, ಈ ಯೋಜನೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಪಂಚಾಯತ್‌ ರಾಜ್ ಇಲಾಖೆ ನಿರ್ಧರಿಸಿದೆ.

ನರೇಗಾ ಯೋಜನೆಯಡಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಎರಡು ವಾರ, ಅಂದರೆ ಇದೇ 24ರವರೆಗೆ ಸ್ಥಗಿತಗೊಳಿಸಲು ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

‘ಈ ಯೋಜನೆಯಡಿ ರಾಜ್ಯದಲ್ಲಿ ದಿನವೊಂದಕ್ಕೆ ಸರಾಸರಿ 9 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆ ಆಗುತ್ತಿದೆ. ಹೀಗಾಗಿ, 14 ದಿನ ಕಾಮಗಾರಿಗಳು ಸ್ಥಗಿತಗೊಂಡರೆ ಸುಮಾರು 1.26 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ನಷ್ಟವಾಗಲಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಈ ವರ್ಷ ಕಳೆದ ಸಾಲಿನಷ್ಟೆ (2020–21) 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಮಾರ್ಚ್‌ ಅಂತ್ಯದವರೆಗೆ 71.67 ಲಕ್ಷ ಕುಟುಂಬಗಳ 1.68 ಕೋಟಿ ಜನರು ಉದ್ಯೋಗಕ್ಕಾಗಿ ನೋಂದಣಿ ಮಾಡಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 84 ಸಾವಿರ ಕುಟುಂಬಗಳ 2.22 ಲಕ್ಷ ಮಂದಿ ಉದ್ಯೋಗ ಚೀಟಿ (ಜಾಬ್‌ ಕಾರ್ಡ್) ಪಡೆದುಕೊಂಡಿದ್ದಾರೆ. ಲಾಕ್‌ಡೌನ್‌ ಕಾರಣದಿಂದ ಸಾವಿರಾರು ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳುತ್ತಿರುವುದರಿಂದ ಇನ್ನಷ್ಟು ಜನರು ಉದ್ಯೋಗ ಚೀಟಿ ಪಡೆಯಬಹುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಯಾವುದೇ ಕಾಮಗಾರಿ ಇಲ್ಲ: ‘ಯೋಜನೆ ಸ್ಥಗಿತಗೊಳಿಸಿದ ಅವಧಿಯಲ್ಲಿ ಸಮುದಾಯ ಅಥವಾ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಾರದು. ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದು, ಈ ಬಗ್ಗೆ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಿಇಒಗಳಿಗೆ ನಿರ್ದೇಶಕರು ಸೂಚಿಸಿದ್ದಾರೆ.

ಆದರೆ, ಈ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ದುರ್ಬಲ ಕುಟುಂಬಗಳನ್ನು ಗುರುತಿಸಿ, ಹೊಸದಾಗಿ ಉದ್ಯೋಗ ಚೀಟಿ ನೀಡಲು ನೋಂದಣಿ ಮಾಡಬೇಕು. ಬಾಕಿ ಇರುವ ಉದ್ಯೋಗ ಚೀಟಿಗಳನ್ನು ವಿತರಿಸುವ ಜತೆಗೆ ನವೀಕರಣ ಕಾರ್ಯ ಕೈಗೊಳ್ಳಬೇಕು. ಅಲ್ಲದೆ, ಕಾಮಗಾರಿಗಳ ಕಡತಗಳು ಮತ್ತು ದಾಖಲೆಗಳನ್ನು ನವೀಕರಿಸಬೇಕು. ಕೂಲಿ ಕಾರ್ಮಿಕರಿಂದ ಕಾಮಗಾರಿಗಳ (ಸಮುದಾಯ, ವೈಯಕ್ತಿಕ) ಉದ್ಯೋಗ ಬೇಡಿಕೆಯನ್ನೂ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿದ ಸೋಂಕು: ‘ಅನೇಕ ಗ್ರಾಮ ಪಂಚಾಯಿತಿಗಳು ಕೆರೆ ಹೂಳೆತ್ತುವುದು ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಕೆಲವೆಡೆ ಸಾಮೂಹಿಕವಾಗಿ ಕಾಮಗಾರಿ ಕೈಗೊಂಡ ವೇಳೆ ಕೊರೊನಾ ಸೋಂಕು ಹರಡಿದ ಮಾಹಿತಿ ಸಿಕ್ಕಿದೆ. ಸೋಂಕಿನ ಸರಪಳಿ ತುಂಡರಿಸಲು ಕಾಮಗಾರಿ ಸ್ಥಗಿತಕ್ಕೆ ನಿರ್ಧರಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

‘ಕೆಲಸ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಅಸಾಧ್ಯವಾಗಿತ್ತು. ಇದನ್ನು ಅರಿತು ಕೆಲವೆಡೆ ಸಾಮೂಹಿಕ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದೂ ಹೇಳಿದರು.

‘ನರೇಗಾ ಸ್ಥಗಿತ ಗಾಯಕ್ಕೆ ಉಪ್ಪು ಸವರಿದಂತೆ’
ಬೆಂಗಳೂರು:
‘ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ನರೇಗಾ ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಮತ್ತು ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಇಲಾಖೆಗಳ ಅನುದಾನಗಳನ್ನು ರಾಜ್ಯ–ಕೇಂದ್ರ ಸರ್ಕಾರ ತಡೆಹಿಡಿದಿರುವುದು ಬಡವರ ಗಾಯಕ್ಕೆ ಉಪ್ಪು ಸವರಿದಂತಾಗಿದೆ’ ಎಂದುಗ್ರಾಮ ಸೇವಾ ಸಂಘದ ಹಿರಿಯ ಸದಸ್ಯ, ರಂಗಕರ್ಮಿ ಪ್ರಸನ್ನ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

‘ನಗರಗಳಲ್ಲಿ ರಿಯಲ್ ಎಸ್ಟೇಟ್ ಕಾಮಗಾರಿಗಳು, ಬೆಂಗಳೂರಿನ ಮೆಟ್ರೊ ಯೋಜನೆ ಮುಂದುವರೆಸಲು ಸರ್ಕಾರ ಅವಕಾಶ ನೀಡಿದೆ. ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳತ್ತ ಹಿಂದಿರುಗುತ್ತಿರುವ ಈ ದಾರುಣ ಸಂದರ್ಭದಲ್ಲಿ ಸರ್ಕಾರದ ಈ ನಡೆ ಖಂಡನೀಯ’ ಎಂದೂ ಹೇಳಿದ್ದಾರೆ.

‘ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದರೆ, ಎಲ್ಲ ಅಸಂಘಟಿತ ವಲಯದ ಕಾರ್ಮಿಕರಿಗೆ ಜೀವನ ನಡೆಸಲು ಆರ್ಥಿಕ ನೆರವು ನೀಡಿದ ನಂತರವಷ್ಟೆ ಈ ತೀರ್ಮಾನ ಜಾರಿಗೊಳಿಸಬೇಕು. ಸರ್ಕಾರ ಈ ವಿವೇಕಹೀನ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಉಗ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳಬೇಕಾದೀತು’ ಎಂದೂ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನಡೆಗೆ ರಾಯಚೂರಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಅಭಯ್‌, ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ನಿತ್ಯಾನಂದ ಸ್ವಾಮಿ, ಯಾದಗಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಕೊಪ್ಪಳದ ನೇಕಾರರ ಮುಖಂಡ, ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಸಾಮಾಜಿಕ ಕಾರ್ಯಕರ್ತರಾದಮಂಗಳೂರಿನ ವಿದ್ಯಾ ದಿನಕರ್, ತುಮಕೂರಿನಸಿ. ಯತಿರಾಜು (ಪರಿಸರ ತಜ್ಞ), ಬೆಳಗಾವಿಯ ಶಿವಾಜಿ ಕಾಗಣೇಕರ, ಶಾರದಾ ಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.