ADVERTISEMENT

ಟೆಕ್ಸ್‌ಟೈಲ್ ಪಾರ್ಕ್‌ಗೆ ಚಾಲನೆ: ಕರ್ನಾಟಕ, ಕಲಬುರಗಿಗೆ ವಿಶೇಷ ದಿನ ಎಂದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2023, 13:12 IST
Last Updated 28 ಮಾರ್ಚ್ 2023, 13:12 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಇಂದು ಚಾಲನೆ ಸಿಕ್ಕಿದ್ದು, ಇದು ಕರ್ನಾಟಕ ಮತ್ತು ಕಲಬುರಗಿಗೆ ವಿಶೇಷ ದಿನ ಎಂದ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಟೆಕ್ಸ್‌ಟೈಲ್ ಪಾರ್ಕ್‌ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ, ‘ಕಲಬುರಗಿಯಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ಈ ಪಾರ್ಕ್ ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಾಚರಿಸುತ್ತದೆ ಮತ್ತು ರಾಜ್ಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

‘ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಕಲಬುರಗಿಗೆ ನಿಜಕ್ಕೂ ವಿಶೇಷ ದಿನ. ಈ ಜವಳಿ ಪಾರ್ಕ್ ಮೂಲಕ ಜಗತ್ತು ಭಾರತದ ಜವಳಿ ವೈವಿಧ್ಯತೆ ಮತ್ತು ನಮ್ಮ ಜನರ ಸೃಜನಶೀಲತೆಯ ದರ್ಶನ ಪಡೆಯುತ್ತದೆ’ ಎಂದು ಮೋದಿ ಕೊಂಡಾಡಿದ್ದಾರೆ.

ADVERTISEMENT

ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಬಸವರಾಜ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದ್ದು, ಒಂಬತ್ತು ಸಂಸ್ಥೆಗಳು ₹1,900 ಕೋಟಿ ಹೂಡಿಕೆ ಒಡಂಬಡಿಕೆಗೆ ಸಹಿ ಹಾಕಿವೆ.

ಶಾಹಿ ಎಕ್ಸ್‌ಪೋರ್ಟ್ಸ್‌ ಮತ್ತು ಹಿಮತ್ಸಿಂಕಾ ಸೀಡೆ ಲಿಮಿಟೆಡ್ ತಲಾ ₹ 500 ಕೋಟಿ, ಟೆಕ್ಸ್‌ಪೋರ್ಟ್‌ ಇಂಡಸ್ಟ್ರೀಸ್, ಕೆಪಿಆರ್ ಮಿಲ್ಸ್ ಲಿಮಿಟೆಡ್ ಮತ್ತು ಪ್ರತಿಭಾ ಸಿಂಟೆಕ್ಸ್‌ ತಲಾ ₹200 ಕೋಟಿ, ಗೋಕುಲದಾಸ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್ ಮತ್ತು ಇಂಡಿಯನ್ ಡಿಸೈನ್ಸ್‌ ತಲಾ ₹100 ಕೋಟಿ, ಸೂರ್ಯವಂಶಿ ಪ್ರೈವೇಟ್ ಲಿಮಿಟೆಡ್ ಮತ್ತು ಸೋನಾಲ್ ಅಪರೆಲ್ ಪ್ರೈವೇಟ್‌ ಲಿಮಿಟೆಡ್ ತಲಾ ₹50 ಕೋಟಿ ಬಂಡವಾಳ ಹೂಡುವುದಾಗಿ ಘೋಷಿಸಿವೆ.

ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ‘ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ನಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 3 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಇದೇ ಮಾದರಿಯಲ್ಲಿ ರಾಯಚೂರು ಮತ್ತು ವಿಜಯಪುರದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ ಸ್ಥಾಪಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆಯ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್‌ ಮಾತನಾಡಿ, ‘ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗಾಗಿ 12 ರಾಜ್ಯಗಳಿಂದ ಅರ್ಜಿ ಬಂದಿದ್ದವು. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯನ್ನು ಗಮನದಲ್ಲಿ ಇರಿಸಿಕೊಂಡು 7 ಪಾರ್ಕ್‌ಗಳಿಗೆ ಮಂಜೂರಾತಿ ನೀಡಲಾಗಿದೆ’ ಎಂದರು.

‘ಜಾಗತಿಕ ಮಾರುಕಟ್ಟೆಯಲ್ಲಿ ಎಂಎಂಎಫ್‌ (ಮಾನವ ನಿರ್ಮಿತ ಫೈಬರ್) ಉಡುಪು, ತಾಂತ್ರಿಕ ಜವಳಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿದೆ. ಕರ್ನಾಟಕವು ಸಿದ್ಧ ಉಡುಪು, ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲಿ ಮುಖ್ಯವಾಗಿ ರೇಷ್ಮೆ ರಫ್ತಿನಲ್ಲಿ ಜಪಾನ್‌ ಬಳಿಕ ಭಾರತ ಎರಡನೇ ರಫ್ತು ರಾಷ್ಟ್ರವಾಗಲಿದೆ. ಈ ಬಗ್ಗೆ ತರಬೇತಿ, ಬೆಂಬಲದ ಅವಶ್ಯಕತೆ ಇದೆ’ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ. ಉಮೇಶ ಜಾಧವ ಇದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.