ನವದೆಹಲಿ: ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವಿಶೇಷ ಸಾಧನೆಗಾಗಿ ಕೇಂದ್ರ ಸರ್ಕಾರದ ಪಂಚಾಯತ್‌ರಾಜ್ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಜಿಲ್ಲಾ ಪಂಚಾಯಿತಿ ಪಡೆದಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ₹2 ಕೋಟಿ ನಗದನ್ನು ಒಳಗೊಂಡಿದೆ.
ಇಲಾಖೆಗಳ ನಡುವೆ ಸಮನ್ವಯ, ವಾರ್ಡ್ ಸಭೆ, ಗ್ರಾಮ ಸಭೆ, ಜಮಾಬಂದಿಗೆ ಒತ್ತು, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಶೈಕ್ಷಣಿಕ ಕಾರ್ಯಕ್ರಮ ಅನುಷ್ಠಾನದ ಗುಣಮಟ್ಟ ಪರಿಶೀಲನೆ, ಶಿಶು ಹಾಗೂ ಗರ್ಭಿಣಿಯರ ಮರಣ ಸಂಭವಿಸದಂತೆ ನಿಗಾ, ಅಪೌಷ್ಟಿಕತೆ ನಿವಾರಣೆ, ಸಾಂಕ್ರಾಮಿಕ ರೋಗಗಳ ಸಮರ್ಥ ನಿರ್ವಹಣೆ ಮತ್ತಿತರ ಉಪಕ್ರಮಗಳಿಗೆ ಈ ಪ್ರಶಸ್ತಿ ಸಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕ ಅಲೆವೂರು ಶ್ರೀನಿವಾಸ ರಾವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.