ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ; ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಸೋನಿಯಾ, ರಾಹುಲ್‌ಗೆ ರಾಜಕೀಯ ಕಿರುಕುಳದ ಷಡ್ಯಂತ್ರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 9:14 IST
Last Updated 15 ಜೂನ್ 2022, 9:14 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಶಿವಮೊಗ್ಗ: ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣ, ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿಗೆ ರಾಜಕೀಯವಾಗಿ ಕಿರುಕುಳ ನೀಡುವ ಉದ್ದೇಶದಿಂದ ಬಿಜೆಪಿಯವರು ಮಾಡಿರುವ ಷಡ್ಯಂತ್ರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತೀರ್ಥಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಹೊಸ ಪ್ರಕರಣ ಅಲ್ಲ. ಈ ಹಿಂದೆ ತನಿಖೆಯೂ ಅಗಿದೆ. ಆದರೂ ರಾಜಕೀಯ ದ್ವೇಷದಿಂದ ಈ ರೀತಿ ಮಾಡಲಾಗುತ್ತಿದೆ.

ಇಡಿ, ಐಟಿ ಸ್ವತಂತ್ರ ಸಂಸ್ಥೆಗಳು. ಅವು ಕಾನೂನುಬದ್ಧವಾಗಿ ಕೆಲಸ ಮಾಡಬೇಕಿದೆ. ಆದರೆ ಈಗ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ವಿರೋಧಿಗಳನ್ನು ಹತ್ತಿಕ್ಕಲು ಬಳಸಿಕೊಳ್ಳಲಾಗುತ್ತಿದೆ. 60 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಯಾವತ್ತೂ ಹೀಗೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೋದಿ ಉತ್ತರ ಕೊಡಲಿ..

’ರಾಜ್ಯಕ್ಕೆ ಬರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಶೇ 40ರಷ್ಟು ಕಮಿಷನ್‌ಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದವರು ಬರೆದಿದ್ದ ಪತ್ರಕ್ಕೆ ಉತ್ತರ ಕೊಡಲಿ. ರಾಜ್ಯದ ಜನರು ಅದರ ನಿರೀಕ್ಷೆಯಲ್ಲಿದ್ದಾರೆ. ಗುತ್ತಿಗೆದಾರರ ಸಂಘದವರು ಬರೆದ ಪತ್ರದ ಬಗ್ಗೆ ಸರ್ಕಾರ ಇಲ್ಲಿಯವರೆಗೆ ಒಂದು ತನಿಖೆ ಮಾಡಲಿಲ್ಲ. ವಿವರಣೆಯನ್ನೂ ಕೊಡಲಿಲ್ಲ‘ ಎಂದು ಸಿದ್ದರಾಮಯ್ಯ ಟೀಕಿಸಿದರು.

ಇತಿಹಾಸ ತಿರುಚುವುದು ಮಾತ್ರ ಗೊತ್ತಿದೆ..

ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲಿದ್ದ ‘ಅಂಬೇಡ್ಕರ್‌ ಸಂವಿಧಾನದ ಶಿಲ್ಪಿ‘ ಎಂಬ ಉಲ್ಲೇಖ ತೆಗೆದು ಹಾಕಿರುವ ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ. ಅದನ್ನು ತಿರುಚುವುದು ಮಾತ್ರ ಗೊತ್ತಿದೆ ಎಂದು ಸಿದ್ದರಮಯ್ಯ ಟೀಕಿಸಿದರು.

ಸಂವಿಧಾನ ರಚನಾ ಉಪಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಅಮಿತ್‌ ಶಾ, ನರೇಂದ್ರ ಮೋದಿ ಆಗಿದ್ದರಾ? ಎಂದು ಪ್ರಶ್ನಿಸಿದರು. ಸಮಿತಿಯ ಅಧ್ಯಕ್ಷರು ಅಂಬೇಡ್ಕರ್ ಆಗಿದ್ದರು. ಅದೇ ಸಮಿತಿಯಲ್ಲಿ ಸದಸ್ಯರಾಗಿದ್ದ ಸಿ.ಟಿ.ಕೃಷ್ಣಮಾಚಾರಿ ಅವರು ಸಂವಿಧಾನ ಶಿಲ್ಪಿ ಎಂದು ಅಂಬೇಡ್ಕರ್‌ಗೆ ಅಭಿದಾನ ನೀಡಿದರು ಎಂದು ಸ್ಮರಿಸಿದರು.

‘ನಾಗೇಶ ಮಂತ್ರಿ ಆಗಲಿಕ್ಕೆ ನಾಲಾಯಕ್ಕು. ಸುಳ್ಳು ಹೇಳುತ್ತಿದ್ದಾರೆ. ಮೊದಲು ಪಠ್ಯದಲ್ಲಿ ಚರಿತ್ರೆ ತಿರುಚಿಲ್ಲ ಎಂದು ಹೇಳಿದ್ದರು. ನಂತರ ತಪ್ಪು ಅಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದರು. ಈಗ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹಾಗಿದ್ದ ಮೇಲೆ ರೋಹಿತ್ ಚಕ್ರತೀರ್ಥನ ಏಕೆ ತೆಗೆದು ಹಾಕಿದರು. ಧಾರವಾಡದಲ್ಲಿ 21 ಸ್ವಾಮೀಜಿಗಳು ಏಕೆ ಸಭೆ ನಡೆಸಿದರು. 71 ಸಾಹಿತಿಗಳು ಸರ್ಕಾರಕ್ಕೆ ಏಕೆ ಪತ್ರ ಬರೆದರು‘ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.