ADVERTISEMENT

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಹೆದ್ದಾರಿ ಬಂದ್‌

ಹಸಿರು ಧ್ವಜ ಹಿಡಿದು ಧರಣಿ ಕುಳಿತ ರೈತರು

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 20:15 IST
Last Updated 10 ಜೂನ್ 2019, 20:15 IST
ಹೊಸಪೇಟೆ ಹೆದ್ದಾರಿ ಬಂದ್‌ ಮಾಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಗದ್ದೆಗಳಲ್ಲಿ ಹರಸಾಹಸ ಮಾಡುತ್ತ ತೆರಳಿದರು
ಹೊಸಪೇಟೆ ಹೆದ್ದಾರಿ ಬಂದ್‌ ಮಾಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಗದ್ದೆಗಳಲ್ಲಿ ಹರಸಾಹಸ ಮಾಡುತ್ತ ತೆರಳಿದರು   

ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಸಿರು ಧ್ವಜ ಹಿಡಿದು ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಮ್ಮಿಶ್ರ ಸರ್ಕಾರ ಸದನದಲ್ಲಿ ಚರ್ಚಿಸದೇ ಏಕಪಕ್ಷೀಯವಾಗಿ ಭೂ ಸ್ವಾಧೀನ ಮಸೂದೆ ಅಂಗೀಕರಿಸಿದೆ. ಇದರಿಂದಾಗಿ ರೈತರು ತಮ್ಮ ಜಮೀನಿನ ಹಕ್ಕು ಕಳೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಮಸೂದೆ ಜಾರಿಗೆ ಅವಕಾಶ ನೀಡಬಾರದು’ ಎಂದು ಘೋಷಣೆ ಕೂಗಿದರು.

ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹೊಸಪೇಟೆ, ರಾಯಚೂರು, ತುಮಕೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 2–3 ತಾಸು ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ದಟ್ಟಣೆ ಉಂಟಾಯಿತು.

ADVERTISEMENT

ಹೊಸಪೇಟೆ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಬಂದ್ ಮಾಡಿದ್ದರಿಂದ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ವಿಜಯಪುರ, ಬಾಗಲ
ಕೋಟೆ, ಪುಣೆ, ಮುಂಬೈಗೆ ಹೋಗುವವರು ಪರದಾಡಿದರು. ಹೆದ್ದಾರಿಯ ಒಂದು ಬದಿಯಲ್ಲಿ ಶಾಮಿಯಾನ ಹಾಕಿ ಹಸಿರು ಧ್ವಜಗಳೊಂದಿಗೆ ರೈತರು ಧರಣಿ ಕುಳಿತರು. ಧರಣಿ ನಿರತರಿಗೆ ಹೆದ್ದಾರಿ ಬದಿಯಲ್ಲೇ ಆಹಾರ ಸಿದ್ಧಪಡಿಸಿ ವಿತರಿಸಲಾಯಿತು.

‘ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಅನುಮತಿ‌ ಅಗತ್ಯ ಇರುವುದಿಲ್ಲ. ಇದು ರೈತರ ಹಿತಾಸಕ್ತಿಗೆ ವಿರುದ್ಧವಾದುದು’ ಎಂದು ಹೊಸಪೇಟೆಯ ರೈತ ಸಂಘ ಅಧ್ಯಕ್ಷ ಜೆ. ಕಾರ್ತಿಕ್ ದೂರಿದರು.

ಚಿಕ್ಕಬಳ್ಳಾಪುರ ನಗರದ ಹೊರವಲಯದ ಚದಲಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದರು. ತುಮಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ನಡೆಯಿತು.

ರಾಯಚೂರು ತಾಲ್ಲೂಕಿನ ವಡ್ಲೂರು ಕ್ರಾಸ್‌ನಲ್ಲಿ ಹೆದ್ದಾರಿಯಲ್ಲಿ ಪ್ರತಿಭಟನೆಕಾರರು ಸಂಚಾರ ಸ್ಥಗಿತಗೊಳಿಸಿದರು. ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪದ ಹೆದ್ದಾರಿ ಬಂದ್ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.