ADVERTISEMENT

‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ನೋಂದಣಿ ಕಡ್ಡಾಯ

ಫೆ.8ರಿಂದ 12ರವರೆಗೆ ಮೇಳ * ಆನ್‌ಲೈನ್‌ನಲ್ಲೂ ಮೇಳ ವೀಕ್ಷಣೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 20:05 IST
Last Updated 8 ಜನವರಿ 2021, 20:05 IST
ರಾಷ್ಟ್ರೀಯ ತೋಟಗಾರಿಕೆ ಮೇಳದ ಲೋಗೊ
ರಾಷ್ಟ್ರೀಯ ತೋಟಗಾರಿಕೆ ಮೇಳದ ಲೋಗೊ   

ಬೆಂಗಳೂರು: ‘ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಫೆ.8ರಿಂದ 12ರವರೆಗೆಭೌತಿಕ ಮತ್ತು ಆನ್‌ಲೈನ್‌ ಮೂಲಕ ನಡೆಯಲಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ ಇರಲಿದೆ’ ಎಂದುಐಐಎಚ್‌ಆರ್‌ ನಿರ್ದೇಶಕ ಎಂ.ಆರ್.ದಿನೇಶ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಆನ್‌ಲೈನ್‌ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಮೇಳದ ಜಾಲತಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೊರೊನಾ ಇರುವುದರಿಂದ ಈ ಬಾರಿ ಭೌತಿಕ ಹಾಗೂ ಆನ್‌ಲೈನ್ ಮೂಲಕ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.ಮೇಳಕ್ಕೆ ಭೌತಿಕವಾಗಿ 30 ಸಾವಿರ ರೈತರಿಗೆ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ಕೊರೊನಾ ಇರುವುದರಿಂದ ಹೆಚ್ಚು ಜನ ಸೇರದಂತೆ ತಡೆಯಲು ನೋಂದಣಿ ಕಡ್ಡಾಯ ಮಾಡಲಾಗಿದೆ’ ಎಂದರು.

ADVERTISEMENT

‘‌ಪ್ರತಿದಿನ ಆರು ಸಾವಿರನೋಂದಾಯಿತ ರೈತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಎರಡು ಅವಧಿಗಳಲ್ಲಿ ಮೇಳ ವೀಕ್ಷಿಸಬಹುದು. ಹೊರ ರಾಜ್ಯಗಳಿಂದ ಬರುವ ರೈತರು ಮೇಳದಲ್ಲಿ ಭಾಗವಹಿಸಲು ಕೆಲವು ನಿಯಮಗಳನ್ನು ಪಾಲಿಸಬೇಕು’ ಎಂದರು.

‘ರಾಜ್ಯ ಮತ್ತು ಹೊರ ರಾಜ್ಯಗಳ ಕೃಷಿ ಉತ್ಪಾದನಾ ಕೇಂದ್ರಗಳಲ್ಲಿ ರೈತರು ಅಂರ್ತಜಾಲದ ಮೂಲಕ ಮೇಳ ವೀಕ್ಷಿಸಬಹುದು. ದೇಶದ 700 ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ಮೂಲಕ ರೈತರನ್ನು ಮೇಳ ತಲುಪಲಿದೆ. ದೇಶದ 16 ರಾಜ್ಯಗಳ 300ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳ ತಜ್ಞರಿಂದ ಮಾಹಿತಿ ದೊರೆಯಲಿದೆ’.

‘ಸಂಸ್ಥೆಯ ವಿಜ್ಞಾನಿಗಳ ಜೊತೆ ರೈತರು ಸಂವಾದ ನಡೆಸಬಹುದು. ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಾಗಾರಗಳು ನಡೆಯಲಿವೆ. ‘ನವೋದ್ಯಮ ಮತ್ತು ಸದೃಢ ಭಾರತಕ್ಕೆ ತೋಟಗಾರಿಕೆ’ ಧ್ಯೇಯವಾಕ್ಯದಡಿ ನಡೆಯಲಿರುವ ಭೌತಿಕ ಹಾಗೂ ಆನ್‌ಲೈನ್‌ ಮೇಳದಲ್ಲಿ 25 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಎಂ.ವಿ.ಧನಂಜಯ್, ‘ಮೇಳದಲ್ಲಿ ಸೀಮಿತ ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮೇಳದ ಬಗ್ಗೆ ಮೂರು ಭಾಷೆಗಳಲ್ಲಿ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿ, ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಮೇಳದ ಬಗ್ಗೆ ಹೆಚ್ಚಿನ ವಿವರ ಹಾಗೂ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವವರು ಸಂಸ್ಥೆಯ ವೆಬ್‌ಸೈಟ್‌https://nhf2021.iihr.res.in ಅನ್ನು ಸಂಪರ್ಕಿಸಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.