ಬೆಂಗಳೂರು: ಶರಣಾಗುವ ನಕ್ಸಲರಿಗೆ ಘೋಷಣೆ ಮಾಡಿದ್ದ ಪ್ಯಾಕೇಜ್‌ಗೆ ಅನುಗುಣವಾಗಿ ಬಾಕಿ ಇದ್ದ ಮೊತ್ತದಲ್ಲಿ ₹72.5 ಲಕ್ಷ ಮೊತ್ತವನ್ನು ನಾಲ್ಕು ದಿನಗಳ ಒಳಗೆ ವಿತರಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದರು.
ವಿಧಾನಸೌಧದಲ್ಲಿ ಶನಿವಾರ ನಡೆದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ 2015ರಲ್ಲಿ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ನಲ್ಲಿ ನೀಡಿದ್ದ ಭರವಸೆಗಳನ್ನು ತ್ವರಿತವಾಗಿ ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
‘ಚಟುವಟಿಕೆ, ಮೊಕದ್ದಮೆಗಳ ಆಧಾರದಲ್ಲಿ ನಕ್ಸಲರನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದು, ₹4 ಲಕ್ಷದಿಂದ ₹7.5 ಲಕ್ಷದವರೆಗೆ ನಗದು, ಕೃಷಿ ಮಾಡಲು ಬಯಸುವವರಿಗೆ ತಲಾ ಎರಡು ಎಕರೆ ಜಮೀನು, ವಿವಿಧ ವೃತ್ತಿಪರ ತರಬೇತಿ ಪಡೆಯಲು ಬಯಸುವವರಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳು ತಲಾ ₹5,000 ನೆರವು ಸಿಕ್ಕಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದರು.
ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ₹10 ಕೋಟಿ ಮೊತ್ತವನ್ನು ಮಾರ್ಗಸೂಚಿಗೆ ಅನುಗುಣವಾಗಿ ಬಳಸಿಕೊಂಡು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು. ರಸ್ತೆ, ನೀರು, ಶಾಲೆ, ಅಂಗನವಾಡಿ, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಶಿವಮೊಗ್ಗ, ಉಡುಪಿ ಜಿಲ್ಲೆಯ ಎಸ್‌ಪಿಗಳ ಸಮನ್ವಯದಲ್ಲಿ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದರು.
ಶರಣಾದ ನಕ್ಸಲರಿಗೆ ಘೋಷಣೆ ಮಾಡಿದ್ದ ಪ್ಯಾಕೇಜ್ ತ್ವರಿತವಾಗಿ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ವಹಿಸಲಾಗಿದೆಶಾಲಿನಿ ರಜನೀಶ್ ಸರ್ಕಾರದ ಮುಖ್ಯಕಾರ್ಯದರ್ಶಿ
ನಕ್ಸಲರ ಮೇಲೆ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಶೀಘ್ರ ಆರಂಭವಾಗಲಿದೆ. ಈ ಕುರಿತ ಕಡತ ಈಗಾಗಲೇ ಹೈಕೋರ್ಟ್ನಲ್ಲಿದೆಕೆ.ಪಿ.ಶ್ರೀಪಾಲ್ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.