ADVERTISEMENT

ನಕ್ಸಲರ ಪ್ರತೀಕಾರ ಸಾಧ್ಯತೆ

ಗುಂಡ್ಲುಪೇಟೆ, ಕೊಡಗು ಗಡಿಭಾಗದಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
ಕೊಡಗಿನಲ್ಲಿ ಎಎನ್‌ಎಫ್‌ ಕಾರ್ಯಾಚರಣೆ
ಕೊಡಗಿನಲ್ಲಿ ಎಎನ್‌ಎಫ್‌ ಕಾರ್ಯಾಚರಣೆ   

ಮೈಸೂರು/ಮಡಿಕೇರಿ: ಕೇರಳದ ವಯನಾಡಿನಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್‌ಗೆ ಪ್ರತೀಕಾರ ತೀರಿಸಿಕೊಳ್ಳಲು ನಕ್ಸಲರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಗಡಿ ಭಾಗದಲ್ಲಿ ಕೇರಳ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಘಟನೆಯಿಂದ ವಿಚಲಿತರಾಗಿ ಬಿಡಿಬಿಡಿಯಾಗಿ ಚದುರಿರುವ ನಕ್ಸಲರು, ಮತ್ತೆ ಒಟ್ಟಾಗಿ ಯಾವುದೇ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭಿಸಿದೆ. ಗಡಿ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಆದುನಿಕ ಬಂದೂಕುಗಳನ್ನು ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇರಳದ ನಕ್ಸಲ್ ನಿಗ್ರಹ ಪಡೆಯು ಶೋಧ ಕಾರ್ಯ ಚುರುಕುಗೊಳಿಸಿದ್ದು, ರಾಜ್ಯದತ್ತ ನಕ್ಸಲರ ತಂಡ ಬರಲಿದೆ ಎಂಬ ಸಂಶಯದ ಮೇರೆಗೆ ಕೊಡಗು ಭಾಗಕ್ಕೆ ಹೊಂದಿಕೊಂಡ ಗಡಿ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆಯ(ಎಎನ್‌ಎಫ್‌) ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

ಶನಿವಾರವೂ ಕಾರ್ಕಳ ಹಾಗೂ ಕೊಡಗು ಜಿಲ್ಲೆಯ ವಯನಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಭಾಗಗಳಾದ ಕುಟ್ಟ, ಕರಿಕೆ, ಮಾಕುಟ್ಟ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಬಿರುನಾಣಿ, ನಾಲಾಡಿ, ಉಡುಂಬೆ, ಹಾಲಾಡಿ, ಕರಿಕೆ, ಪೇರೂರು, ಸಂಪಾಜೆ ಅರಣ್ಯ ಪ್ರದೇಶದಲ್ಲಿ ಎಎನ್‌ಎಫ್‌ ಸಿಬ್ಬಂದಿ ಶೋಧ ನಡೆಸಿದರು.

ಹೀಗಾಗಿ, ನಕ್ಸಲರ ತಂಡವು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸಂಧಿಸುವ ‘ಟ್ರೈ ಜಂಕ್ಷನ್’ ಪ್ರದೇಶದ ಮೂಲಕ ತಮಿಳುನಾಡಿಗೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಸಮೀಪದ ಮರಳಳ್ಳದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಪೊಲೀಸ್ ಗುಂಡಿಗೆ ಬಲಿಯಾದ ನಕ್ಸಲ್ ಜಲೀಲ್‌ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಹಿಂಭಾಗದಿಂದ ಗುಂಡು ತಗುಲಿರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.