ADVERTISEMENT

ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 15 ಸಾವಿರದ ಗಡಿಯತ್ತ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 16:12 IST
Last Updated 7 ಡಿಸೆಂಬರ್ 2023, 16:12 IST
ಡೆಂಗಿ ಪ್ರಕರಣ
ಡೆಂಗಿ ಪ್ರಕರಣ   

ಬೆಂಗಳೂರು: ಬಿಸಿಲು–ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಏರುತ್ತಲೇ ಇದ್ದು, ಒಟ್ಟು ಪ್ರಕರಣಗಳ ಸಂಖ್ಯೆ 15 ಸಾವಿರದ (14,955) ಗಡಿ ಸಮೀಪಿಸಿದೆ. 

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಂದು ತಿಂಗಳ ಅವಧಿಯಲ್ಲಿ 1,829 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ರಾಜ್ಯದ 31 ಜಿಲ್ಲೆಗಳಿಂದ 7,282 ಪ್ರಕರಣಗಳು ದೃಢಪಟ್ಟರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 7,673 ಪ್ರಕರಣಗಳು ಖಚಿತಪಟ್ಟಿವೆ. 

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣ ವರದಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು. ಅವರಲ್ಲಿ ಒಂಬತ್ತು ಮಂದಿ ಜ್ವರದ ತೀವ್ರತೆಗೆ ಮೃತಪಟ್ಟಿರುವುದು ದೃಢಪಟ್ಟಿತ್ತು. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. 

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ 52,721 ಡೆಂಗಿ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 33,326 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 839 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ. 

ಕಲಬುರಗಿಯಲ್ಲಿ 662, ಮೈಸೂರಿನಲ್ಲಿ 646, ಉಡುಪಿಯಲ್ಲಿ 635, ದಕ್ಷಿಣ ಕನ್ನಡದಲ್ಲಿ 492, ಶಿವಮೊಗ್ಗದಲ್ಲಿ 404, ತುಮಕೂರಿನಲ್ಲಿ 315 ಹಾಗೂ ಚಿತ್ರದುರ್ಗದಲ್ಲಿ 300 ಪ್ರಕರಣಗಳು ಖಚಿತಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 300ಕ್ಕಿಂತ ಕಡಿಮೆಯಿದೆ.

28 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 60 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 31 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 1,481 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ಮೈಸೂರು (196), ವಿಜಯಪುರ (163), ಕಲಬುರಗಿ (132) ಹಾಗೂ ಶಿವಮೊಗ್ಗದಲ್ಲಿ (125) ಅಧಿಕ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.