ADVERTISEMENT

ಏಕರೂಪ ಶಿಕ್ಷಣ ಜಾರಿಯಾಗಲಿ: ಸಾಹಿತಿ ಪ್ರೊ. ದೊಡ್ಡರಂಗೇಗೌಡ ಆಗ್ರಹ

ಪರಿಷತ್‌ ಆವರಣದಲ್ಲಿ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿ ಪ್ರೊ. ದೊಡ್ಡರಂಗೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 14:01 IST
Last Updated 20 ಫೆಬ್ರುವರಿ 2021, 14:01 IST
ಹಾಸನ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಶನಿವಾರ ಆರಂಭಗೊಂಡ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಮಾತನಾಡಿದರು
ಹಾಸನ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಶನಿವಾರ ಆರಂಭಗೊಂಡ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಮಾತನಾಡಿದರು   

ಹಾಸನ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕರೂಪ ಶಿಕ್ಷಣ ಜಾರಿಯಾಗಬೇಕು ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಆವರಣದ ಎಸ್‌.ಕೆ.ಕರೀಂಖಾನ್‌ ವೇದಿಕೆಯಲ್ಲಿ ಶನಿವಾರ ಆರಂಭಗೊಂಡ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ಕನ್ನಡ ಶಾಲೆಗಳು ಮುಚ್ಚುತ್ತಿರುವುದಕ್ಕೆ ಖಾಸಗಿ ಶಾಲೆಗಳೇ ಕಾರಣ. ಈ ಶಾಲೆಗಳಲ್ಲಿ ವೇಷ ಭೂಷಣ, ಪಾಠೋಪಕರಣ, ಪೀಠೋಪಕರಣಕ್ಕೆ ಆಕರ್ಷಣೆಗೊಂಡು ಮಕ್ಕಳನ್ನು ಕಳುಹಿಸಲಾಗುತ್ತಿದೆ. ಬಡವರಿಗೂ ಉತ್ತಮ ಶಿಕ್ಷಣ ಸಿಗಬೇಕಾದರೆ ದೇಶದಲ್ಲಿ ಏಕರೂಪ ಶಿಕ್ಷಣ ಜಾರಿಯಾಗಬೇಕು ಹಾಗೂ ಶಿಕ್ಷಣ ನೀತಿ ಕೂಡ ಬದಲಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಗೆ ಜೋತು ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳು ಡ್ಯಾಡಿ, ಮಮ್ಮಿ ಎಂದು ಕರೆದರೆ ಕಿರೀಟ ಬರುವುದಿಲ್ಲ. ಪ್ರತಿ ಮನೆಗಳಲ್ಲೂ ಕನ್ನಡ ಮಾತನಾಡಬೇಕು. ಮೊಬೈಲ್‌ನಲ್ಲೂ ಕನ್ನಡದಲ್ಲಿಯೇ ಸಂದೇಶ ಕಳುಹಿಸಬೇಕು ಎಂದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್‌ ತನ್ನ ಕ್ಷೇತ್ರ ಕಾರ್ಯವನ್ನು ಬದಲಿಸಿಕೊಳ್ಳಬೇಕು. ಕನ್ನಡ ನಾಡಿನಲ್ಲಿ ಕನ್ನಡೇತರರಿಗೆ ಉದ್ಯೋಗ ಸಿಗಬೇಕಾದರೆ ಆ ವ್ಯಕ್ತಿ ಕನ್ನಡದಲ್ಲಿ ಮಾತನಾಡುವ, ಬರೆಯುವ ಪರಿಣತಿ ಹೊಂದಿರಬೇಕು. ಕನಿಷ್ಠ ಮೂರು ತಿಂಗಳ ಪ್ರಶಿಕ್ಷಣ ಪಡೆಯಬೇಕು. ವಿದೇಶಗಳಲ್ಲಿ ಡಾಕ್ಟರ್‌, ಎಂಜಿನಿಯರ್ ಅಥವಾ ಯಾವುದೇ ಹುದ್ದೆ ದೊರೆತರೆ ಮೂರು ತಿಂಗಳು ಅಲ್ಲಿನ ಭಾಷೆ ಕಲಿತು, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಉದ್ಯೋಗ ಸಿಗುತ್ತದೆ. ನಮ್ಮಲ್ಲಿ ಆ ವ್ಯವಸ್ಥೆ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಆ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು. ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಾಗಾರ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶ ತಿರುಗಿ ಬರೆಯುವ ಸಾಹಿತ್ಯಕ್ಕೂ, ಮನೆಯಲ್ಲಿ ಕುಳಿತು ಬರೆಯುವ ಸಾಹಿತ್ಯಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಯುವ ಸಾಹಿತಿಗಳು ಚಾರಣಿರಾಗಬೇಕು. ಆಗ ಶ್ರೇಷ್ಠ ಕಾವ್ಯ ಬರಲು ಸಾಧ್ಯ. 12 ವರ್ಷ ಕುವೆಂಪು ಅವರು ಮಲೆನಾಡಿನಲ್ಲಿ ತಿರುಗಾಡಿ ಪ್ರಕೃತಿಯ ಸೌಂದರ್ಯವನ್ನು ಸವಿದು ಒಳ್ಳೆಯ ಸಾಹಿತ್ಯ ರಚಿಸಿದರು. ಸಾಹಿತ್ಯ ಎಂಬುದು ಜೀವನದ ಪ್ರತಿಬಿಂಬ ಎನ್ನುತ್ತಾರೆ ಕೆಲವರು. ಆದರೆ ದೊಡ್ಡರಂಗೇಗೌಡ ಹೇಳುವುದು ‘ಸಾಹಿತ್ಯ ಜನಜೀವನದ ಮತಿಬಿಂಬ’ ಎಂದು ನುಡಿದರು.

ಇದೇ ವೇಳೆ ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ ಅವರ ಮಕ್ಕಳ ರಾಮಾಯಣ, ಪುಟ್‌ಪುಟ್‌ ಗೊಂಬೆ–ಪುಟಾಣಿ ಗೊಂಬೆ, ಎನ್.ಎಲ್‌.ಚನ್ನೇಗೌಡರ ರಾಮಾಯಣದೊಳಗೊಂದಿಷ್ಟು ರಾಮಾಯಣ, ಡಾ.ಅವರೇ ಕಾಡು ವಿಜಯಕುಮಾರ್ ಅವರ ಭಾಷೆ ಸಮಾಜ ಸಂಸ್ಕೃತಿ, ಹೊನ್ನಶೆಟ್ಟಿಹಳ್ಳಿ ಗಿರಿರಾಜರ ಸುರತಸ್ವೈರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಸಮ್ಮೇಳನಾಧ್ಯಕ್ಷ ಮೇಟಿಕೆರೆ ಹಿರಿಯಣ್ಣ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ವಿಜಯ ಹಾಸನ, ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವ ಕಾರ್ಯದರ್ಶಿ ಕಲ್ಲಹಳ್ಳಿ ಹರೀಶ್‌, ಸಾಹಿತಿ ಶೇಖರ ಗೌಡ ಮಾಲಿ ಪಾಟೀಲ, ಪ್ರತ್ರಕರ್ತ ಆರ್‌.ಪಿ.ವೆಂಕಟೇಶ್ ಮೂರ್ತಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಓ. ಮಹಾಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.