ADVERTISEMENT

‘ನೀರಿನ ಹೆಜ್ಜೆ’ ನ.5 ರಂದು ಬಿಡುಗಡೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಜಲ ವಿವಾದ, ಒಪ್ಪಂದ, ತೀರ್ಪುಗಳ ಗುಚ್ಛ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 15:45 IST
Last Updated 2 ನವೆಂಬರ್ 2025, 15:45 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

‌ಬೆಂಗಳೂರು: ‘ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜಲ ವಿವಾದಗಳು, ಒಪ್ಪಂದಗಳು, ನ್ಯಾಯಾಲಯದ ತೀರ್ಪುಗಳು, ನೀರಾವರಿ ಯೋಜನೆಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಚಿತ್ರಣವಿರುವ ನಾನು ಬರೆದಿರುವ ‘ನೀರಿನ ಹೆಜ್ಜೆ’ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 5ರಂದು ಬಿಡುಗಡೆ ಮಾಡಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ADVERTISEMENT

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಅಂದು ಸಂಜೆ 4 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಚ್‌.ಕೆ. ಪಾಟೀಲ, ಎಂ.ಬಿ. ಪಾಟೀಲ, ಎನ್‌.ಎಸ್‌. ಬೋಸರಾಜು, ಸುಪ್ರೀಂ ಕೋರ್ಟ್‌ ವಕೀಲ ಮೋಹನ್‌ ವಿ. ಕಾತರಕಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘1956 ಆಗಸ್ಟ್‌ 28ರಂದು ದೇಶದ ನದಿಗಳ ಮತ್ತು ಕಣಿವೆ ವಿವಾದಗಳ ನ್ಯಾಯ ನಿರ್ಣಯಕ್ಕೆ ಜಾರಿಗೊಳಿಸಲಾದ ಅಂತರರಾಷ್ಟ್ರೀಯ ಜಲ ಕಾಯ್ದೆ, ಜಲ ಒಪ್ಪಂದಗಳು ಯಾವುವು, ಆ ದೇಶಗಳು ಕೈಗೊಂಡ ನಿರ್ಧಾರಗಳೇನು? ಭಾರತದ ನಿಲುವುಗಳು ಏನಾಗಿತ್ತು? ದೇಶದ ನದಿಗಳ ಜೋಡಣೆ ಬಿಕ್ಕಟ್ಟು, ಪರಿಹಾರ ಹಾಗೂ ಜೋಡಣೆ ಸಾಧ್ಯವೇ? ದೇಶದಲ್ಲಿನ ನದಿಗಳ ವಿವಾದ ಮತ್ತು ಅಲ್ಲಿನ ಪರಿಸ್ಥಿತಿ ಏನು ಎಂಬುದರ ಬಗ್ಗೆ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ರಾಜ್ಯದ ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಬಗ್ಗೆಯೂ ಸಮಗ್ರ ಮಾಹಿತಿಯಿದೆ’ ಎಂದರು.

‘ಬಾಂಗ್ಲಾದೇಶದೊಂದಿಗೆ ಬೇಸಿಗೆ ಅವಧಿಯಲ್ಲಿ ನೀರಿನ ಹರಿವು ಹಂಚಿಕೊಳ್ಳಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮಹಾನದಿ, ಶಾರದಾ ಒಪ್ಪಂದಕ್ಕೆ ಅಂದಿನ ಪ್ರಧಾನಿ ದೇವೇಗೌಡರು ಸಹಿ ಹಾಕಿ, ಪ್ರಮುಖ 12 ಅಧ್ಯಾಯಗಳನ್ನು ಒಳಗೊಂಡ ನಿಯಮಾವಳಿ ರೂಪಿಸಲಾಗಿತ್ತು. 1971ರಲ್ಲಿ ನೀರಾವರಿ ಯೋಜನೆಗಳಿಗೆ ವಿಶ್ವಬ್ಯಾಂಕ್‌ ನೆರವು ನೀಡುವುದಕ್ಕೆ ಆರಂಭಿಸಿತ್ತು. ನಂತರದಲ್ಲಿ ದೇಶದ ನದಿ ಜೋಡಣೆ ವಿಚಾರ ಮುನ್ನೆಲೆಗೆ ಬಂತು. ಕೇಂದ್ರ ಸರ್ಕಾರದ ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಸಂಸ್ಥೆಯು ಹಿಮಾಲಯದ 14 ನದಿ, ದಕ್ಷಿಣ ಭಾರತದ 16 ನದಿ ಜೋಡಣೆ ಹಾಗೂ ರಾಜ್ಯದ ಒಳಗಿನ 37 ನದಿ ಜೋಡಣೆಗೆ ವರದಿ ನೀಡಿತ್ತು. ಆ ಎಲ್ಲ ವಿಷಯಗಳು ಈ ಕೃತಿಯಲ್ಲಿದೆ’ ಎಂದು ವಿವರಿಸಿದರು.

‘1952ರ ಸೆ. 29ರಂದು ಕೃಷ್ಣಾ ನದಿ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಬಂದಿದ್ದ ಅಂದಿನ ಪ್ರಧಾನಿ ಜವಾಹರ‌ಲಾಲ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ಭಾರತದ ದೇಗುಲಗಳಿದ್ದಂತೆ ಎಂದು ಉಲ್ಲೇಖಿಸಿದ್ದರು. ಅದನ್ನೂ ಉಲ್ಲೇಖಿಸಿದ್ದೇನೆ. ಕೃತಿಯಲ್ಲಿ ಯಾರನ್ನೂ ಟೀಕೆ ಮಾಡಿಲ್ಲ. ರಾಜಕೀಯ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ವಾಸ್ತವಾಂಶಗಳನ್ನಷ್ಟೆ ದಾಖಲಿಸಿದ್ದೇನೆ’ ಎಂದೂ ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.