ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಶೇ 93ರಷ್ಟು ಸೀಟುಗಳು ಭರ್ತಿಯಾಗಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಎಲ್ಲಾ ಕೋರ್ಸ್‌ಗಳಿಂದ ಲಭ್ಯವಿದ್ದ ಒಟ್ಟು 1,35,954 ಸೀಟುಗಳಲ್ಲಿ 1,09,399 ಸೀಟುಗಳು ಭರ್ತಿಯಾಗಿವೆ. ಎಂಜಿನಿಯರಿಂಗ್‌ನಲ್ಲಿ ಲಭ್ಯವಿದ್ದ 77,140 ಸೀಟುಗಳಲ್ಲಿ 71,813 ಸೀಟುಗಳು ಮೊದಲ ಸುತ್ತಿನಲ್ಲೇ ಭರ್ತಿಯಾಗಿವೆ. ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಂಬಂಧಿತ ಕೋರ್ಸ್‌ಗಳ ಬಹುತೇಕ ಸೀಟುಗಳು ಬೆಂಗಳೂರು ಮಾತ್ರವಲ್ಲದೆ, ಹಾಸನ, ಬೀದರ್, ಗದಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ಭರ್ತಿಯಾಗಿವೆ.
‘ಮೊದಲ ಸುತ್ತಿನ ಸೀಟು ಹಂಚಿಯಲ್ಲಿ ಖಾಲಿ ಉಳಿದ ಸೀಟುಗಳನ್ನು ಎರಡು ಮತ್ತು ಮೂರನೇ ಸುತ್ತಿಗೆ ಪರಿಗಣಿಸಲಾಗುವುದು. ಇದೇ ಮೊದಲ ಬಾರಿ ಉಳಿದ ಸುತ್ತುಗಳಿಗೆ ಅತ್ಯಂತ ಕಡಿಮೆ ಸೀಟುಗಳು ಲಭ್ಯವಾಗುತ್ತವೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ನಲ್ಲಿ ಹೆಚ್ಚಿನ ಸೀಟುಗಳು ಉಳಿದಿವೆ. ಲಭ್ಯವಿದ್ದ 31,726 ಸೀಟುಗಳಲ್ಲಿ 16,540 ಸೀಟು, ದಂತ ವೈದ್ಯಕೀಯದಲ್ಲಿ 482 ಸೀಟುಗಳು ಭರ್ತಿಯಾಗದೆ ಉಳಿದಿವೆ. 9,263 ವೈದ್ಯಕೀಯ ಸೀಟುಗಳಲ್ಲಿ 8,321 ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.