ADVERTISEMENT

ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಪರೀಕ್ಷೆ: ರಾಜ್ಯದಲ್ಲಿ ನೀಟ್‌ ಸುಸೂತ್ರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 19:45 IST
Last Updated 17 ಜುಲೈ 2022, 19:45 IST
ನೀಟ್ ಪರೀಕ್ಷೆ ಬರೆಯಲು ಆರ್ಮಿ ಪಬ್ಲಿಕ್‌ ಶಾಲೆಯ ಪರೀಕ್ಷಾ ಕೊಠಡಿ ಪ್ರವೇಶಿಸಲು ಸರತಿ ಸಾಲಿನಲ್ಲಿ ನಿಂತಿರುವ  ವಿದ್ಯಾರ್ಥಿನಿಯರು
ನೀಟ್ ಪರೀಕ್ಷೆ ಬರೆಯಲು ಆರ್ಮಿ ಪಬ್ಲಿಕ್‌ ಶಾಲೆಯ ಪರೀಕ್ಷಾ ಕೊಠಡಿ ಪ್ರವೇಶಿಸಲು ಸರತಿ ಸಾಲಿನಲ್ಲಿ ನಿಂತಿರುವ  ವಿದ್ಯಾರ್ಥಿನಿಯರು   

ಬೆಂಗಳೂರು: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ –2022 (ನೀಟ್‌) ರಾಜ್ಯದಲ್ಲಿ ಭಾನುವಾರ ಸುಸೂತ್ರವಾಗಿ ನಡೆಯಿತು.

ರಾಜ್ಯದಲ್ಲಿ 1.19 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿದ್ದರು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.20ರವರೆಗೆ ಪರೀಕ್ಷೆ ನಡೆಯಿತು. ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದರಿಂದ ಮಧ್ಯಾಹ್ನ 12 ಗಂಟೆಯ ವೇಳೆಗೆ ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು ನೆರೆದಿದ್ದರು.

ಕಿವಿಯೋಲೆ ಸೇರಿದಂತೆ ಯಾವುದೇ ರೀತಿಯ ಆಭರಣಗಳನ್ನು ಧರಿಸುವಂತಿಲ್ಲವೆಂದು ಸೂಚನೆ ನೀಡಿದ್ದರಿಂದ ವಿದ್ಯಾರ್ಥಿಗಳು ಈ ಸೂಚನೆಗಳನ್ನು ಪಾಲಿಸಿದ್ದರು. ಸೂಚನೆ ಮರೆತು ಬಂದಿದ್ದ ಅಭ್ಯರ್ಥಿಗಳು ಸ್ಥಳದಲ್ಲೇ ಅದನ್ನು ಬಿಚ್ಚಿ ಪೋಷಕರಿಗೆ ನೀಡಿ ಬಳಿಕ ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಶೂ ಧರಿಸಲು ನಿಷೇಧ ಹೇರಿದ್ದರಿಂದ ಚಪ್ಪಲಿಯಲ್ಲಿ ವಿದ್ಯಾರ್ಥಿಗಳು ಬಂದಿದ್ದರು.

ADVERTISEMENT

‘ವಿದ್ಯಾರ್ಥಿಗಳು ಪಾಲಿಸಬೇಕಾದ ಸಾಮಾನ್ಯ ಸೂಚನೆಗಳನ್ನು ಈ ಬಾರಿ ಕೂಡ ಮೊದಲೇ ನೀಡಿದ್ದರಿಂದ ಅದೇ ರೀತಿ ಅಭ್ಯರ್ಥಿಗಳು ಕೇಂದ್ರಕ್ಕೆ ಬಂದಿದ್ದರು. ಹೀಗಾಗಿ, ಎಲ್ಲಿಯೂ ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಬ್ಬರು ತಿಳಿಸಿದರು.

‘ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಪಠ್ಯೇತರ ಭಾಗದಿಂದ ಪ್ರಶ್ನೆಗಳನ್ನು ಕೇಳಿರಲಿಲ್ಲ. ಎಲ್ಲ ಪ್ರಶ್ನೆಗಳನ್ನು ಎನ್‌ಸಿಇಆರ್‌ಟಿ ಪಠ್ಯದಲ್ಲಿಯೇ ಕೇಳಿದ್ದರು’ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.