ADVERTISEMENT

ನೆಹರೂ ವಿದ್ರೋಹ ಮರೆಯಲು ಸಾಧ್ಯವಿಲ್ಲ: ಬಿ.ಎಲ್‌.ಸಂತೋಷ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 19:45 IST
Last Updated 24 ಆಗಸ್ಟ್ 2019, 19:45 IST
ಮಂಡ್ಯದ ಮೃತ ಯೋಧ ಗುರು ತಂದೆ ಹೊನ್ನಯ್ಯ ಮತ್ತು ತಾಯಿ ಚಿಕ್ಕತಾಯವ್ವ, ಲ್ಯಾನ್ಸ್ ನಾಯ್ಕ್‌ ಹನುಮಂತಪ್ಪ ಕೊಪ್ಪದ ಅವರ ತಾಯಿ ಬಸವ್ವ, ರಾಷ್ಟ್ರೀಯ ರೈಫಲ್ಸ್‌ನ ನಾಯ್ಕ್‌ ಸವಿನ್‌ ಅವರ ತಾಯಿ ನಂಜಮ್ಮ, ರಾಷ್ಟ್ರೀಯ ರೈಫಲ್ಸ್‌ನ ನಾಯ್ಕ್‌ ತಿಮ್ಮಯ್ಯ ಅವರ ಪತ್ನಿ ಆಶಾ ತಿಮ್ಮಯ್ಯ ಮತ್ತು ಸಿಪಾಯಿ ಎಂ.ಕೆ.ಅಯ್ಯಪ್ಪ ಅವರ ತಾಯಿ ಎಂ.ಕೆ.ಸರಸ್ವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಂಡ್ಯದ ಮೃತ ಯೋಧ ಗುರು ತಂದೆ ಹೊನ್ನಯ್ಯ ಮತ್ತು ತಾಯಿ ಚಿಕ್ಕತಾಯವ್ವ, ಲ್ಯಾನ್ಸ್ ನಾಯ್ಕ್‌ ಹನುಮಂತಪ್ಪ ಕೊಪ್ಪದ ಅವರ ತಾಯಿ ಬಸವ್ವ, ರಾಷ್ಟ್ರೀಯ ರೈಫಲ್ಸ್‌ನ ನಾಯ್ಕ್‌ ಸವಿನ್‌ ಅವರ ತಾಯಿ ನಂಜಮ್ಮ, ರಾಷ್ಟ್ರೀಯ ರೈಫಲ್ಸ್‌ನ ನಾಯ್ಕ್‌ ತಿಮ್ಮಯ್ಯ ಅವರ ಪತ್ನಿ ಆಶಾ ತಿಮ್ಮಯ್ಯ ಮತ್ತು ಸಿಪಾಯಿ ಎಂ.ಕೆ.ಅಯ್ಯಪ್ಪ ಅವರ ತಾಯಿ ಎಂ.ಕೆ.ಸರಸ್ವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.   

ಬೆಂಗಳೂರು: ‘ನಮ್ಮ ಮೊದಲ ಪ್ರಧಾನಿ ನೆಹರೂ ಮತ್ತು ಬ್ರಿಟನ್‌ನ ಹೈಕಮಿಷನರ್‌ ಆಗಿದ್ದ ಕೃಷ್ಣ ಮೆನನ್‌ ಈ ದೇಶಕ್ಕೆ ಮಾಡಿ ಹೋಗಿರುವ ವಿದ್ರೋಹವನ್ನು ನೂರು ಪೀಳಿಗೆ ದಾಟಿದರೂ ಮರೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

ಲೇಖಕ ಸಂತೋಷ್ ತಮ್ಮಯ್ಯ ಅವರ, ‘ಸಮರ ಭೈರವಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಪ್ಪತ್ತೂ ಚಿಲ್ಲರೆ ವರ್ಷಗಳಲ್ಲಿ ನೆಹರೂ ಮಾಡಿ ಹೋಗಿರುವ ನೂರಾರು ಎಡವಟ್ಟುಗಳನ್ನು ಇವತ್ತು ನಮ್ಮ ಪಕ್ಷದ ಸರ್ಕಾರ ಸರಿ ಮಾಡುತ್ತಿದೆ’ ಎಂದರು.

‘ನಮ್ಮ ದೇಶದಲ್ಲಿ ನ್ಯಾಯಾಂಗವೂ ಸೇರಿದಂತೆ ಅನೇಕ ಸಂಸ್ಥೆಗಳು ಎಷ್ಟೋ ಸಂದರ್ಭಗಳಲ್ಲಿ ವಿಫಲವಾಗಿವೆ. ಆದರೆ, ಸೇನೆ ಮಾತ್ರ ಯಾವತ್ತೂ ನಪಾಸಾಗಿಲ್ಲ. ರಾಷ್ಟ್ರದ ರಕ್ಷಣೆ ಮತ್ತು ಬದ್ಧತೆ ವಿಷಯದಲ್ಲಿ 130 ಕೋಟಿ ಜನರ ವಿಶ್ವಾಸವನ್ನು ಅದು ಸದಾ ಕಾಪಾಡಿಕೊಂಡು ಬಂದಿದೆ’ ಎಂದರು.

ADVERTISEMENT

ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ರಾಜ್ಯ ಸಚಿವ ಹಾಗೂ ನಿವೃತ್ತ ಜನರಲ್ ವಿ.ಕೆ.ಸಿಂಗ್‌ ಮಾತನಾಡಿದರು.

‘ಸಂತೋಷ್‌ಗೆ ಇತಿಹಾಸ ಗೊತ್ತಿಲ್ಲ’

‘ಜವಾಹರಲಾಲ್‌ ನೆಹರು ಈ ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಅವರಿಗೇನು ಗೊತ್ತಿದೆ. ಇತಿಹಾಸ ಗೊತ್ತಿಲ್ಲದವರು ಏನು ಬೇಕಾದರೂ ಮಾತನಾಡಬಹುದು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಕಾಂಗ್ರೆಸ್‌ ಶಾಸಕ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಕುರಿತು ನಗರದಲ್ಲಿ ಶುಕ್ರವಾರ ಉಪನ್ಯಾಸ ನೀಡಿದ್ದ ಸಂತೋಷ್‌, ‘ನೆಹರೂ ಅವರ ಎಡವಟ್ಟುಗಳಿಂದ ಜಮ್ಮು ಮತ್ತು ಕಾಶ್ಮೀರ ಹಿಂಸಾಚಾರದ ತಾಣವಾಗಿತ್ತು. ಅದನ್ನು ಮೋದಿ ಸರಿಪಡಿಸಿದ್ದಾರೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ನೆಹರು ಇಲ್ಲದಿದ್ದರೆ ಕಾಶ್ಮೀರ ದೇಶದಲ್ಲಿ ಉಳಿಯುತ್ತಿರಲಿಲ್ಲ. ನೆಹರು, ಶಾಸ್ತ್ರಿಯಿಂದ ಕಾಶ್ಮೀರ ನಮ್ಮಲ್ಲೇ ಉಳಿದಿದೆ. ಸಂತೋಷ್‌ ಅವರಿಗೆ ಇತಿಹಾಸ ಗೊತ್ತಿಲ್ಲ. ಸುಳ್ಳಿನ ಮೂಲಕ ಜನರ ದಾರಿ ತಪ್ಪಿಸುವುದಷ್ಟೇ ಅವರ ಗುರಿ’ ಎಂದರು.

‘ನೆಹರು ಬಗ್ಗೆ ಮಾತನಾಡಲು ಸಂತೋಷ್ ಅವರಿಗೆ ಹಕ್ಕಿಲ್ಲ. ಆರ್‌ಎಸ್ಎಸ್‌ ಕೊಡುಗೆ ಏನು ಎನ್ನುವುದನ್ನು ಅವರು ಮೊದಲು ಹೇಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.