ADVERTISEMENT

ಸಂಪಾಜೆ ಘಾಟ್‌: ಮತ್ತೊಮ್ಮೆ ಹೆದ್ದಾರಿಯ ತಾತ್ಕಾಲಿಕ ದುರಸ್ತಿ

ಅನುದಾನದ ಕೊರತೆ – ಶಾಶ್ವತ ಕಾಮಗಾರಿ ಮರೀಚಿಕೆ

ಅದಿತ್ಯ ಕೆ.ಎ.
Published 5 ಜೂನ್ 2019, 12:05 IST
Last Updated 5 ಜೂನ್ 2019, 12:05 IST
ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ – 275ರಲ್ಲಿ ಮತ್ತೆ ತಾತ್ಕಾಲಿಕ ದುರಸ್ತಿ ಕಾಮಗಾರಿ – ಪ್ರಜಾವಾಣಿ ಚಿತ್ರ 
ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ – 275ರಲ್ಲಿ ಮತ್ತೆ ತಾತ್ಕಾಲಿಕ ದುರಸ್ತಿ ಕಾಮಗಾರಿ – ಪ್ರಜಾವಾಣಿ ಚಿತ್ರ    

ಮಡಿಕೇರಿ: ತಾತ್ಕಾಲಿಕವಾಗಿ ದುರಸ್ತಿಕಂಡು ಮತ್ತೆ ಕುಸಿತದ ಭೀತಿಗೆ ಒಳಗಾಗಿದ್ದ ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಮತ್ತೊಮ್ಮೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಈ ಹೆದ್ದಾರಿಯ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿ ಮೂರು ತಿಂಗಳು ವಾಹನ ಸಂಚಾರ ಬಂದ್‌ ಆಗಿತ್ತು. ಬಳಿಕ ಹೆದ್ದಾರಿ ಪ್ರಾಧಿಕಾರವು ‘ಎಂ–ಸ್ಯಾಂಡ್‌’ ಚೀಲ, ಜಿಯೋ ಸಿಂಥೆಟಿಕ್‌ ಅಳವಡಿಸಿ ತಾತ್ಕಾಲಿಕ ದುರಸ್ತಿ ನಡೆಸಿತ್ತು. ಇನ್ನೇನು ಮುಂಗಾರು ಕಾಲಿಡಲು ಕೆಲವೇ ದಿನಗಳಿದ್ದು ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬಂತೆ ಈಗ ತಾತ್ಕಾಲಿಕ ದುರಸ್ತಿಗೆ ಮತ್ತೆ ಪ್ರಾಧಿಕಾರ ಮುಂದಾಗಿದೆ.

ಬೇಸಿಗೆಯ ಬಿಸಿಲು ಹಾಗೂ ತಿಂಗಳಿಂದ ಆಗ್ಗಾಗ್ಗೆ ಸುರಿಯುತ್ತಿರುವ ಮಳೆಗೆ ಮತ್ತೆ ಭೂಕುಸಿತದ ಭೀತಿ ಎದುರಾಗಿತ್ತು. ಮರಳಿನ ಚೀಲಗಳು ಕುಸಿದು ಬೀಳುವ ಹಂತದಲ್ಲಿದ್ದವು. ಮಳೆ ಸಮೀಪಸುತ್ತಿರುವಾಗ ಎಚ್ಚೆತ್ತುಕೊಂಡಿರುವ ಹೆದ್ದಾರಿ ಪ್ರಾಧಿಕಾರವು ಎರಡು ದಿನಗಳಿಂದ ಆಧುನಿಕ ತಂತ್ರಜ್ಞಾನ ಬಳಸಿ ಭೂಕುಸಿತ ಸ್ಥಳಗಳನ್ನು ದುರಸ್ತಿ ನಡೆಸುತ್ತಿದೆ.

ADVERTISEMENT

ಮರಳಿನ ಚೀಲದ ಮೇಲೆ ಕಬ್ಬಿಣದ ಸರಳು ಅಳವಡಿಸಿ, ಅದರ ಮೇಲೆ ಕಾಂಕ್ರೀಟ್‌ ಹಾಕಿ ಮಳೆಯ ನೀರು ಒಳಹೋಗದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡು ದಿನಗಳಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಮಡಿಕೇರಿಯಿಂದ ಒಂದು ಕಿ.ಮೀ ದೂರದಲ್ಲಿ ಕಳೆದ ಜುಲೈನಲ್ಲಿ ಮೊದಲ ಬಾರಿಗೆ ದೊಡ್ಡ ಭೂಕುಸಿತವಾಗಿತ್ತು. ಮಳೆ ತೀವ್ರಗೊಂಡಂತೆ ಹೆದ್ದಾರಿಗೆ ಮತ್ತಷ್ಟು ಹಾನಿಯಾಗಿತ್ತು. ಶಾಶ್ವತ ಕಾಮಗಾರಿ ಬದಲಿಗೆ ಮತ್ತೆ ತಾತ್ಕಾಲಿಕ ದುರಸ್ತಿಯನ್ನೇ ನಡೆಸಲಾಗುತ್ತಿದೆ. ಅದು ಮೂರು ತಿಂಗಳು ಸುರಿಯುವ ಮಳೆಯನ್ನು ಎಷ್ಟರಮಟ್ಟಿಗೆ ತಡೆದುಕೊಳ್ಳಲಿದೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

14 ಸ್ಥಳದಲ್ಲಿ ಕುಸಿತ: 2018ರ ಜೂನ್‌ ಮೊದಲ ವಾರದಿಂದ ಆಗಸ್ಟ್‌ ಕೊನೆ ತನಕ ಸುರಿದ ನಿರಂತರ ಮಳೆಯಿಂದ ಮಡಿಕೇರಿಯಿಂದ ಸಂಪಾಜೆ ತನಕದ 14 ಕಿಲೋ ಮೀಟರ್‌ ಉದ್ದದ ಹೆದ್ದಾರಿಯಲ್ಲಿ 14 ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿತ್ತು. ಕೆಲವಡೆ ಹೆದ್ದಾರಿ ಕುರುಹು ನಾಪತ್ತೆವೇ ಆಗಿತ್ತು. ಬಳಿಕ ₹ 10 ಕೋಟಿ ವೆಚ್ಚದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಂಡಿದ್ದ ಹೆದ್ದಾರಿಯಲ್ಲಿ ಶಾಶ್ವತ ಕಾಮಗಾರಿ ಮಾತ್ರ ಇನ್ನೂ ನಡೆದಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿತ್ತು.

ಶಾಶ್ವತ ದುರಸ್ತಿಗೆ ₹ 47 ಕೋಟಿ ಅನುದಾನಕೋರಿ ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಹಲವು ತಿಂಗಳು ಕಳೆದರೂ ಶಾಶ್ವತ ಕಾಮಗಾರಿಗೆ ಒಪ್ಪಿಗೆ ಸಿಕ್ಕಿಲ್ಲ. ಮತ್ತದೇ ತಾತ್ಕಾಲಿಕ ದುರಸ್ತಿಯನ್ನೇ ನಡೆಸಲಾಗುತ್ತಿದೆ.

ಸಣ್ಣ ಮಳೆಗೂ ಹೆದ್ದಾರಿ ಬದಿ ಕುಸಿಯುತ್ತಿದೆ. ಎಡಭಾಗದಲ್ಲಿ ಭೂಕುಸಿತವಾದ ಸ್ಥಳವನ್ನು ಈಗ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಮಾಡಲಾಗುತ್ತಿದೆ. ಆದರೆ, ಮತ್ತೊಂದು ಬದಿಯ ಬೆಟ್ಟದ ಮಣ್ಣು ಹೆದ್ದಾರಿಗೆ ಬಿದ್ದರೆ ವಾಹನ ಸಂಚಾರವೇ ಬಂದ್ ಆಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.