ADVERTISEMENT

ಹೊಸ ಶಿಕ್ಷಣ ನೀತಿ: ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ

ಕಾರ್ಯಪಡೆ ಸಮಿತಿಯಿಂದ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 22:55 IST
Last Updated 30 ನವೆಂಬರ್ 2020, 22:55 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ‘ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ಕಾರ್ಯಪಡೆ ಸಮಿತಿ ಸಲ್ಲಿಸಿದ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ‘ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿ ಕುರಿತು ಚರ್ಚಿಸಲಾಗುವುದು. ಅಲ್ಲದೆ, ವಿಧಾನಮಂಡಲ ಅಧಿವೇಶನದಲ್ಲಿ ನೀತಿಯ ರೂಪರೇಷೆಗಳ ಕುರಿತು ಚರ್ಚಿಸಿ, ಅದರ ಜಾರಿಗೆ ಶಾಸನಾತ್ಮಕ ಕ್ರಮಗಳು ಮತ್ತು ಅನುಷ್ಠಾನಕ್ಕೆ ಅಗತ್ಯವಾದ ಆಯೋಗ ಸೇರಿದಂತೆ ಇತರ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘34 ವರ್ಷಗಳ ನಂತರದ ಮತ್ತು ಈ ಶತಮಾನದ ಮೊದಲ ಶಿಕ್ಷಣ ನೀತಿಯಾಗಿ ರೂಪಿತವಾಗಿರುವ ನೂತನ ಶಿಕ್ಷಣ ನೀತಿಯನ್ನು ಒಂದು ಆಂದೋಲನದ ಮಾದರಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ನೀತಿ ಅನುಷ್ಠಾನಕ್ಕೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಒದಗಿಸಬೇಕು’ ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು.

ADVERTISEMENT

ಕಾರ್ಯಪಡೆಯ ಸದಸ್ಯರಾದ ತಿಮ್ಮೇಗೌಡ ಶಿಕ್ಷಣ ನೀತಿ ರೂಪರೇಷೆಗಳ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಪಡೆಯ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸದಸ್ಯರಾದ ಶಿಕ್ಷಣ ತಜ್ಞ ಡಾ.ಎಂ.ಕೆ. ಶ್ರೀಧರ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಡಾ.ಅನುರಾಗ್ ಬೆಹರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.