ADVERTISEMENT

ಆಡಳಿತ ವ್ಯವಸ್ಥೆಯಿಂದ ಬೇಸತ್ತು ಹೊಸ ಪಕ್ಷ ಕಟ್ಟಿದ ಮಾಜಿ ಸೈನಿಕರು

ಅದಿತ್ಯ ಕೆ.ಎ.
Published 13 ನವೆಂಬರ್ 2022, 20:56 IST
Last Updated 13 ನವೆಂಬರ್ 2022, 20:56 IST
ಪಕ್ಷದ ಚಿಹ್ನೆ
ಪಕ್ಷದ ಚಿಹ್ನೆ   

ಬೆಂಗಳೂರು: ಈಗಿನ ವ್ಯವಸ್ಥೆಯಿಂದ ಬೇಸತ್ತು ವಿಭಿನ್ನ ಆಲೋಚನೆ ಹಾಗೂ ಆಡಳಿತದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಮಾಜಿ ಸೈನಿಕರು ‘ಸಾರ್ವಜನಿಕ ಆದರ್ಶ ಸೇನಾ’ ಎಂಬ ರಾಜಕೀಯ ಪಕ್ಷವೊಂದನ್ನು ರಾಜ್ಯದಲ್ಲಿ ಕಟ್ಟಿದ್ದಾರೆ.

ದಕ್ಷಿಣ ಭಾರತದಲ್ಲಿ ಮಾಜಿ ಸೈನಿಕರು, ನಿವೃತ್ತ ಸೇನಾಧಿಕಾರಿಗಳೇ ಸೇರಿಕೊಂಡು ಪ್ರಥಮ ಬಾರಿಗೆ ಈ ಪಕ್ಷ ಸ್ಥಾಪಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಸೇನಾಗೆ ಅನುಮೋದನೆ ನೀಡಿದೆ. ಪಕ್ಷದ ಪ್ರಥಮ ಅಧ್ಯಕ್ಷರಾಗಿ ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಬ್ರಿಗೇಡಿಯರ್ ಆಗಿ ನಿವೃತ್ತರಾದ ಬಳಿಕ ಇಲ್ಲಿನ ವಿದ್ಯಾರಣ್ಯಪುರದಲ್ಲಿ ನೆಲೆಸಿರುವ ರವಿ ಮುನಿಸ್ವಾಮಿ ಆಯ್ಕೆಗೊಂಡಿದ್ದಾರೆ.

ADVERTISEMENT

ಜಂಟಿ ಕಾರ್ಯದರ್ಶಿಗಳಾಗಿ ನಿವೃತ್ತ ಮೇಜರ್‌ ಎನ್‌.ರಘುರಾಮ್‌ ರೆಡ್ಡಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿಯ ನಿವೃತ್ತ ಸುಬೇದಾರ್‌ ರಮೇಶ್‌ ಜಗತ್ತಪ್ಪ ಆಯ್ಕೆಗೊಂಡಿದ್ದಾರೆ.

‘ಶ್ರೀಲಂಕಾ ಆಪರೇಷನ್‌’ ವೇಳೆ ರವಿ ಶಾಸ್ತ್ರಸ್ತ್ರಗಳ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. ರಘುರಾಮ್‌ರೆಡ್ಡಿ ಸಹ ಗಡಿಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಿದ್ದವರು.

‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಬಯಕೆಯಿದೆ’ ಎಂದು ಅಧ್ಯಕ್ಷ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಹಳೆ ಚಿಹ್ನೆ ನಿಗದಿ ಪಡಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ.

‘ಜನರಿಂದ ಜನರಿಗಾಗಿ ಜನರಿ ಗೋಸ್ಕರ ಸರ್ಕಾರಗಳು ಆಡಳಿತ ನಡೆಸುತ್ತಿಲ್ಲ. ಭ್ರಷ್ಟಾಚಾರ ತಾಂಡವ
ವಾಡುತ್ತಿದೆ. ಧರ್ಮದ ಹೆಸರಿನಲ್ಲಿ ವ್ಯರ್ಥ ಹೋರಾಟಗಳು ನಡೆಯುತ್ತಿವೆ. ಧರ್ಮದ ಹೋರಾಟ ಜನರಿಗೆ ಶಿಕ್ಷಣ, ಅನ್ನ ನೀಡುತ್ತಿಲ್ಲ. ಪರಿಣಾಮಕಾರಿ, ಪಾರದರ್ಶಕ, ಬದ್ಧತೆಯುಳ್ಳ ಆಡಳಿತ ರಾಜ್ಯಕ್ಕೆ ಬೇಕಿದೆ. ಅದನ್ನು ಈಡೇರಿಸುವ ಆಲೋಚನೆ ಹೊಸ ಪಕ್ಷದ್ದು’ ಎಂದು ಪಕ್ಷದ ನೇತೃತ್ವ ವಹಿಸಿರುವ ನಿವೃತ್ತ ಸೇನಾಧಿಕಾರಿಗಳು ಹೇಳುತ್ತಾರೆ.

ಜನರಿಂದಲೇ ದೇಣಿಗೆ: ಜಿಲ್ಲಾಮಟ್ಟ ದಲ್ಲೂ ಪದಾಧಿಕಾರಿಗಳನ್ನು ನೇಮಿಸ ಲಾಗುವುದು. ಮಾಜಿ ಸೈನಿಕರ ಸಂಘಗಳ ಬೆಂಬಲ ಪಕ್ಷಕ್ಕಿದೆ. ರಾಜ್ಯದಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್, ವೈದ್ಯರು ಹಾಗೂ ಸುಶಿಕ್ಷಿತರು ನೆರವು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಪಕ್ಷದ ಉದ್ಘಾಟನೆ, ವೆಬ್‌ಸೈಟ್: http://sasparty.in ಅನಾವರಣ ನಡೆಯಲಿದೆ. ಜನವರಿ ಯಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗು ವುದು ಎಂದು ಅಧ್ಯಕ್ಷರು ತಿಳಿಸಿದರು.

ವೆಬ್‌ಸೈಟ್‌ನಲ್ಲಿ ಖರ್ಚು, ವೆಚ್ಚ ಪ್ರಕಟ
ಸಭೆ, ಪ್ರಚಾರ, ಚುನಾವಣೆಯ ಖರ್ಚಿಗೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ. ಪ್ರತಿ ರೂಪಾಯಿಯ ಖರ್ಚು ವೆಚ್ಚಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ನಿವೃತ್ತ ಸೈನಿಕರಿರುವ ಕಾರಣಕ್ಕೆ ಪಕ್ಷದಲ್ಲಿ ಶಿಸ್ತು ಇರಲಿದೆ ಎಂದು ರವಿ ಮುನಿಸ್ವಾಮಿ ಹೇಳಿದರು.

**

ಜನರು ಬದಲಾವಣೆ ಬಯಸಿದ್ದಾರೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಮೇಲೆ ಬೇಸತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
–ರವಿ ಮುನಿಸ್ವಾಮಿ, ಅಧ್ಯಕ್ಷ, ‘ಸಾರ್ವಜನಿಕ ಆದರ್ಶ ಸೇನಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.