ADVERTISEMENT

ಹೊಸ‌ ತಾಲ್ಲೂಕುಗಳು ಅನುದಾನಕ್ಕೆ ಕಾರ್ಯದರ್ಶಿಗಳ ಸಭೆ: ಆರ್.ವಿ.ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 5:59 IST
Last Updated 3 ಜುಲೈ 2019, 5:59 IST
   

ಕಲಬುರ್ಗಿ: ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಚರ್ಚಿಸಲು ಇದೇ 4ರಂದು ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಅಫಜಲಪುರ ತಾಲ್ಲೂಕಿನ ಗೊಬ್ಬುರ (ಕೆ) ಗ್ರಾಮದಲ್ಲಿ ಬುಧವಾರ ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲ್ಲೂಕುಗಳಲ್ಲಿ ಇನ್ನೂ ಮೂಲಸೌಕರ್ಯ ಕಲ್ಪಿಸಬೇಕಿದೆ. ಬರೀ ಕಂದಾಯ ಕಚೇರಿಗಳಷ್ಟೇ ಆರಂಭವಾಗಿವೆ ಎಂದರು.

ADVERTISEMENT

ಹಣದ ಕೊರತೆ ಇಲ್ಲ: ರಾಜ್ಯದಾದ್ಯಂತ ಬರಗಾಲ ಕಾಮಗಾರಿ ಕೈಗೆತ್ತಿಕೊಳ್ಳಲು ಯಾವುದೇ ಹಣದ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 600 ಕೋಟಿ ಹಣ ಇದೆ. ಕಲಬುರ್ಗಿ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 12 ಕೋಟಿ ಇದೆ ಎಂದರು.

ನಾಲ್ಕು ತಂಡಗಳು: ಬರಗಾಲ ಕಾಮಗಾರಿಗಳನ್ನು ಪರಿಶೀಲಿಸಲು ಕಂದಾಯ, ಸಹಕಾರ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಸಚಿವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಾನು ಈಗಾಗಲೇ 16 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಂದು ದೇಶಪಾಂಡೆ ಹೇಳಿದರು.

ಶಾಸಕರ ರಾಜೀನಾಮೆ ವಿಚಾರ ಅಧ್ಯಕ್ಷರು ನೋಡಿಕೊಳ್ತಾರೆ: ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸುಭದ್ರವಾಗಿದೆ‌. ಶಾಸಕರ ರಾಜೀನಾಮೆ ‌ವಿಚಾರ ನನಗೆ ಸಂಬಂಧಿಸಿದ್ದಲ್ಲ. ಅದನ್ನು ಪಕ್ಷದ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಟ್ಯಾಂಕರ್ ನೀರು ಪೂರೈಕೆಯನ್ನು ಮೂರು ತಿಂಗಳಿಗಿಂತ ಹೆಚ್ಚು ವಿಸ್ತರಿಸಬಾರದು‌ ಎಂಬುದು ಕೇಂದ್ರ ಸರ್ಕಾರದ ನಿಯಮ. ಆದಾಗ್ಯೂ, ಎಷ್ಟು ಬೇಕಾದರೂ ವಿಸ್ತರಿಸಬಹುದು ಎಂದು ಸಡಿಲಿಕೆ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಜಿ.ಪಂ. ಸಿಇಒ ಡಾ.ರಾಜಾ ಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.