
ಸಾಮರಸ್ಯದ ಬದುಕು
ನಮ್ಮ ನಾಡಿನ ಸಾಮರಸ್ಯದ ಬದುಕು ಸಜೀವ ಮತ್ತು ಉಸಿರಾಡುವ ಪರಿಕಲ್ಪನೆಯಾಗಿರಬೇಕು. ಅದು ಪದಗಳ ಬದಲಿಗೆ ನಮ್ಮ ದಿನನಿತ್ಯದ ಸಂವಾದಗಳಲ್ಲಿ, ನೆರೆಹೊರೆಯ ಸಹಕಾರದಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳ ನಾಗರಿಕ ವರ್ತನೆಯಲ್ಲಿ ಗೋಚರಿಸಬೇಕು. ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿನ ಭಿನ್ನತೆಗಳು ನಮ್ಮನ್ನು ಪ್ರತ್ಯೇಕಿಸುವ ಗೆರೆಗಳಾಗದೆ, ನಮ್ಮ ಸಾಮೂಹಿಕ ಗುರುತಿನ ಶ್ರೀಮಂತ ನೇಯ್ಗೆಯ ಎಳೆಗಳಾಗಿರಬೇಕು. ಸಾಮರಸ್ಯ ಎಂದರೆ ಎಲ್ಲರೂ ಒಂದೇ ಆಗಿರಬೇಕು ಎಂದಲ್ಲ; ಬದಲಿಗೆ, ನಾವೆಲ್ಲರೂ ನಮ್ಮ ವೈಶಿಷ್ಟ್ಯವನ್ನು ಉಳಿಸಿಕೊಂಡು ಸಾಮೂಹಿಕ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬಲ್ಲೆವು ಎಂಬ ತಿಳಿವಳಿಕೆ. ಧರ್ಮ, ಭಾಷೆ, ಜಾತಿ, ಅಂತಸ್ತು ಮತ್ತು ಲಿಂಗಾಧಾರಿತ ವೈರುಧ್ಯಗಳು ನಮ್ಮನ್ನು ಬೇರ್ಪಡಿಸುವ ಗೋಡೆಗಳಲ್ಲ ಎಂಬ ಅರಿವಿನೊಂದಿಗೆ ದಿನನಿತ್ಯದ ಬದುಕಿನಲ್ಲಿ ಸಣ್ಣ ಸೌಜನ್ಯ, ಪರಸ್ಪರ ಗೌರವ, ಕೇಳುವ ಸಹನೆ—ಇವೇ ಸಾಮರಸ್ಯದ ನಿಜವಾದ ರಾಜಕೀಯ. ಹೊಸ ವರ್ಷದಲ್ಲಿ ನಾಡು ಮಾತಿನಿಂದಲ್ಲ, ಬದುಕಿನಿಂದಲೇ ಸಹ ಬಾಳ್ವೆಯನ್ನು ಬರೆಯಲಿ.
ನಮ್ಮಲ್ಲಿಯ ಮಾನವೀಯತೆಯ ಬಲವನ್ನು ಮತ್ತಷ್ಟು ಗುರುತಿಸಿ, ಅಪನಂಬಿಕೆಯ ಬದಲಿಗೆ ಸಹಕಾರವನ್ನು ಮೆರೆಸೋಣ.
ಬಾನು ಮುಷ್ತಾಕ್, ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ
ಅಮೂಲ್ಯ ಔಷಧೀಯ ಸಸ್ಯಗಳ ಆಗರ...
ಅಮೂಲ್ಯ ಔಷಧೀಯ ಸಸ್ಯಗಳ ಆಗರ ಕಪ್ಪತಗುಡ್ಡದ ಉಳಿವಿಗಾಗಿ ತೀವ್ರ ಹೋರಾಟ ನಡೆದಿದ್ದರಿಂದ ಸರ್ಕಾರ ಅದನ್ನು ‘ವನ್ಯಜೀವಿಧಾಮ’ ಎಂದು ಘೋಷಿಸುವಂತಾಯಿತು. ಇದೇ ರೀತಿ ನಮ್ಮ ನಾಡಿನ ಎಲ್ಲ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಸಂಕಲ್ಪ ನಮ್ಮದಾಗಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳು ಮಾಡುವುದು ಎಂದರೆ ಅದು ಮನೆಹಾಳು ಕೆಲಸ. ನಾಡಿನ ಮಳೆ ಬೆಳೆ ಪರಿಶುದ್ಧ ಗಾಳಿಗೆ ಆಧಾರವಾಗಿರುವ ಪಶ್ಚಿಮ ಘಟ್ಟವನ್ನು ಹಾಳು ಮಾಡಿ ವಿದ್ಯುತ್ ಉತ್ಪಾದಿಸುವುದು ಅರ್ಥಹೀನ. ಈಗ ವಿದ್ಯುತ್ ಉತ್ಪಾದನೆಗೆ ಸೌರ ಶಕ್ತಿ ಪವನ ಶಕ್ತಿ ಸೇರಿ ಬೇರೆ ಮೂಲಗಳಿವೆ. ವಿದ್ಯುತ್ ಬೇಡಿಕೆ ಇಂದು ಗಂಭೀರ ಸಮಸ್ಯೆಯಾಗಿ ಉಳಿದಿಲ್ಲ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆಗಳಿಗೆ ಸರ್ಕಾರ ಕೈ ಹಾಕಲೇಬಾರದು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ತೋಂಟದಾರ್ಯ ಸಂಸ್ಥಾನಮಠ ಗದಗ
ರೈತರಲ್ಲಿ ಮೂಡಲಿ ಹರ್ಷ...
ಹೊಸ ವರ್ಷದಲ್ಲಿ ಯಾವೊಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು. ಅಂತಹದ್ದೊಂದು ವಾತಾವರಣ ಸೃಷ್ಟಿಯಾಗಬೇಕು. ಕಬ್ಬು ಮೆಕ್ಕೆಜೋಳ ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಉತ್ತಮ ದರ ಇಲ್ಲದೆ ರೈತರು ತೊಂದರೆ ಅನುಭವಿಸಬೇಕಾಯಿತು. ಹೊಸ ವರ್ಷದಲ್ಲಾದರೂ ಸರ್ಕಾರ ಬೆಳೆಗಳ ಬೆಲೆ ರಕ್ಷಣೆ ನೀತಿಯನ್ನು ಜಾರಿಗೆ ತರಬೇಕು. ಹವಾಮಾನ ವೈಪರೀತ್ಯದ ಮೊದಲ ಏಟು ತಿನ್ನುತ್ತಿರುವವರು ರೈತರು. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೃಷಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಮತ್ತು ಬದಲಾದ ಹವೆಗೆ ಪೂರಕವಾಗಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಸಂಶೋಧನೆಗಳು ನಡೆಯಬೇಕು. ಹಳ್ಳಿಗಳಿಂದ ಜನರು ವಲಸೆ ಹೋಗುವುದು ಹೊಸ ವರ್ಷದಲ್ಲಿ ನಿಲ್ಲಬೇಕು.
–ಚುಕ್ಕಿ ನಂಜುಂಡಸ್ವಾಮಿ ರೈತ ನಾಯಕಿ
ಪರಿಸರ ರಕ್ಷಣೆಗಾಗಿ ಕೈ ಎತ್ತಿ
ಅಮೂಲ್ಯ ಔಷಧೀಯ ಸಸ್ಯಗಳ ಆಗರ ಕಪ್ಪತಗುಡ್ಡದ ಉಳಿವಿಗಾಗಿ ತೀವ್ರ ಹೋರಾಟ ನಡೆದಿದ್ದರಿಂದ ಸರ್ಕಾರ ಅದನ್ನು ‘ವನ್ಯಜೀವಿಧಾಮ’ ಎಂದು ಘೋಷಿಸುವಂತಾಯಿತು. ಇದೇ ರೀತಿ ನಮ್ಮ ನಾಡಿನ ಎಲ್ಲ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಸಂಕಲ್ಪ ನಮ್ಮದಾಗಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಹಾಳು ಮಾಡುವುದು ಎಂದರೆ ಅದು ಮನೆಹಾಳು ಕೆಲಸ. ನಾಡಿನ ಮಳೆ, ಬೆಳೆ, ಪರಿಶುದ್ಧ ಗಾಳಿಗೆ ಆಧಾರವಾಗಿರುವ ಪಶ್ಚಿಮ ಘಟ್ಟವನ್ನು ಹಾಳು ಮಾಡಿ ವಿದ್ಯುತ್ ಉತ್ಪಾದಿಸುವುದು ಅರ್ಥಹೀನ. ಈಗ ವಿದ್ಯುತ್ ಉತ್ಪಾದನೆಗೆ ಸೌರ ಶಕ್ತಿ, ಪವನ ಶಕ್ತಿ ಸೇರಿ ಬೇರೆ ಮೂಲಗಳಿವೆ. ವಿದ್ಯುತ್ ಬೇಡಿಕೆ ಇಂದು ಗಂಭೀರ ಸಮಸ್ಯೆಯಾಗಿ ಉಳಿದಿಲ್ಲ. ಹೀಗಾಗಿ, ಶರಾವತಿ ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆಗಳಿಗೆ ಸರ್ಕಾರ ಕೈ ಹಾಕಲೇಬಾರದು.
ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ತೋಂಟದಾರ್ಯ
ಸಂಸ್ಥಾನಮಠ, ಗದಗ
ಲಂಚಾವತಾರ ಕೊನೆಗೊಳಿಸುವ ಸೇನಾನಿಗಳಾಗಿ
ಹೊಸ ವರ್ಷದ ಹೊಸ್ತಿಲಲ್ಲಿ ಕುಣಿದು ಕುಪ್ಪಳಿಸಿ, ಒಂದು ದಿನ ಸಂಭ್ರಮಾಚರಿಸು
ವುದು ಸರಿ. ಆದರೆ, ಅದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಕಾನೂನು ಹೇರಿಕೆಯಿಂದ ಮಾತ್ರವೇ ಭ್ರಷ್ಟಾಚಾರ ನಿಲ್ಲಿಸಲಾಗದು. ಭ್ರಷ್ಟಾಚಾರದ ವಿರುದ್ಧದ ಹೋರಾಟ ನಮ್ಮಿಂದಲೇ, ನಮ್ಮ ಮನೆಯಿಂದಲೇ ಆರಂಭವಾಗಬೇಕು. ಪ್ರಾಮಾಣಿಕವಾಗಿ ಇರಿ ಎಂದು ಮತ್ತೊಬ್ಬರಿಗೆ ಹೇಳುವುದಕ್ಕೂ ಮೊದಲು, ನಾವು ಪ್ರಾಮಾಣಿಕವಾಗಿ ಇರಬೇಕು. ಈ ಬಗ್ಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜಾಗೃತಿ ಮೂಡಿಸುವ ಹೊಣೆಗಾರಿಕೆಯು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗದ ಮೇಲೆ ಇದೆ.
–ನ್ಯಾಯಮೂರ್ತಿ ಬಿ.ವೀರಪ್ಪ, ಉಪ ಲೋಕಾಯುಕ್ತ
ವಿಕೇಂದ್ರೀಕರಣದ ಆಶಯ ಈಡೇರಲಿ
ರಾಜ್ಯ ಸರ್ಕಾರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು 2026ರಲ್ಲಿ ನಡೆಸುವ ಮೂಲಕ ಅಧಿಕಾರ ವಿಕೇಂದ್ರೀಕರಣದ ಆಶಯಗಳನ್ನು ಸಾಕಾರಗೊಳಿಸಬೇಕು. ಜಿಲ್ಲಾ ಪಂಚಾಯಿತಿಗಳ ಅವಧಿ 2021ಕ್ಕೆ ಕೊನೆಗೊಂಡ ನಂತರ ಇಲ್ಲಿಯವರೆಗೂ ಚುನಾವಣೆ ನಡೆಸಲು ಸಾಧ್ಯವಾಗದಿರುವುದು ಸ್ಥಳೀಯ ಸಮಸ್ಥೆಗಳ ಬಲವರ್ಧನೆಗೆ ದೊಡ್ಡ ಪೆಟ್ಟು. ಕೆಳ ಹಂತದ ಅಧಿಕಾರ ಬಲಗೊಳ್ಳದೆ ಪ್ರಜಾಪ್ರಭುತ್ವದ ಆಶಯಗಳ ಅನುಷ್ಠಾನ ಸಾಧ್ಯವಾಗುವುದಿಲ್ಲ. ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಒತ್ತು ನೀಡುವ ಬದಲು, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ್ಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಭಾಗದ ಜನರಿಗೆ ಒಂದು ವರ್ಷದ ಒಳಗೆ ಕನಿಷ್ಠ ನಿರೀಕ್ಷೆ ಮೂಡಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಗ್ಯಾರಂಟಿ ಜಪಕ್ಕಿಂತ ಅಭಿವೃದ್ಧಿಯತ್ತಲೂ ಚಿತ್ತ ಹರಿಸಬೇಕು. ಬಹು ಮುಖ್ಯವಾಗಿ ಶಿಕ್ಷಣ ಕ್ಷೇತ್ರವನ್ನು ಕಾರ್ಪೊರೇಟ್ ಕಪಿಮುಷ್ಟಿಯಿಂದ ಹೊರತರಬೇಕು. ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಬಲಗೊಳಿಸುವ ಮೂಲಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೀರೆರೆಯಬೇಕು.
–ವಲೇರಿಯನ್ ರೋಡ್ರಿಗಸ್, ನಿವೃತ್ತ ಪ್ರಾಧ್ಯಾಪಕ, ಮಂಗಳೂರು ವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.