ADVERTISEMENT

ಇಬ್ಬರ ನಡುವೆ ಮಂತ್ರಿ ಸ್ಥಾನಕ್ಕೆ ಪೈಪೋಟಿ

ಸ್ಪೀಕರ್‌ ಆಗಲು ಕೆ.ಜಿ. ಬೋಪಯ್ಯ ಹಿಂದೇಟು, ರಂಜನ್‌ಗೆ ಮತ್ತೆ ಒಲಿಯುವುದೇ ಸಚಿವ ಸ್ಥಾನ?

ಅದಿತ್ಯ ಕೆ.ಎ.
Published 31 ಜುಲೈ 2019, 4:44 IST
Last Updated 31 ಜುಲೈ 2019, 4:44 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ವಿಧಾನಸಭೆಯ ಸ್ಪೀಕರ್‌ ಆಗಲು ಹಿಂದೇಟು ಹಾಕಿದ್ದು ವಿಶ್ವೇಶ್ವರ ಹೆಗಡೆ ಕಾಗೇರಿ ಆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಈ ದಿಢೀರ್‌ ಬೆಳವಣಿಗೆಯೂ ಕೊಡಗಿನ ರಾಜಕೀಯ ವಲಯದಲ್ಲೂ ಸಂಚಲನಕ್ಕೆ ಕಾರಣವಾಗಿದೆ.

ಬೋಪಯ್ಯ ಅವರು ಸ್ಪೀಕರ್ ಹುದ್ದೆಗೇರಿದರೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ಗೆ ಮಂತ್ರಿ ಸ್ಥಾನ ಒಲಿಯಲಿದೇ ಎಂಬ ಲೆಕ್ಕಾಚಾರಗಳು ಕೇಳಿಬಂದಿದ್ದವು. ಆದರೆ, ಬೋಪ್ಪಯ್ಯ ‘ಸ್ಪೀಕರ್‌ ಸ್ಥಾನ ಬೇಡ’ ಎಂದಿರುವುದು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಅಪ್ಪಚ್ಚು ರಂಜನ್‌ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ನಡುವೆ ಪೈಪೋಟಿ ಏರ್ಪಡುವಂತೆ ಮಾಡಿದೆ. ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ. ಇಬ್ಬರೂ ಶಾಸಕರೂ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ.

ಕೊಡವ ಕೋಟಾದ ಅಡಿ ಸ್ಥಾನ:2008ರಲ್ಲಿ ರಂಜನ್‌ ಕ್ರೀಡಾ ಸಚಿವರಾಗಿದ್ದರು. ಮತ್ತೊಮ್ಮೆ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದಾರೆ. 105 ಬಿಜೆಪಿ ಶಾಸಕರ ಪೈಕಿ ಏಕೈಕ ಕೊಡವ ಶಾಸಕ ಅಪ್ಪಚ್ಚು ರಂಜನ್‌. ಅದೇ ಕೋಟಾದ ಅಡಿ ರಂಜನ್‌ಗೆ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ರಂಜನ್‌ಗೆ ಮಂತ್ರಿ ಸ್ಥಾನ ನೀಡದಿದ್ದರೆ ಕೊಡವ ಸಮುದಾಯದ ಮುನಿಸಿಗೂ ಕಾರಣ ಆಗಬಹುದು ಎಂದು ಮಾತುಗಳು ವ್ಯಕ್ತವಾಗಿವೆ.

ADVERTISEMENT

ಮೊದಲ ಹಂತದಲ್ಲಿ ರಂಜನ್‌ ಸಂಪುಟ ಸೇರದಿದ್ದರೂ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುವುದು ಪಕ್ಕಾ ಎಂದು ಕೆಲವರು ವಾದಿಸುತ್ತಾರೆ.

‘ಒಟ್ಟು 22 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ಬಿಟ್ಟರೆ ಕೊಡವ ಸಮುದಾಯದಿಂದ ಯಾರೂ ಶಾಸಕರಿಲ್ಲ. ನನ್ನನ್ನು ಪರಿಗಣಿಸುವ ವಿಶ್ವಾಸವಿದೆ. ಒಮ್ಮೆ ಕೊಡಗಿನ ಮೂವರು (ಎಂ.ಎಂ.ನಾಣಯ್ಯ, ಟಿ.ಜಾನ್‌, ಸುಮಾ ವಸಂತ್‌) ಮಂತ್ರಿ ಆಗಿದ್ದರು. ಎಸ್‌ಸಿ, ಕೊಡವ, ಅಲ್ಪಸಂಖ್ಯಾತರ ಕೋಟಾದ ಅಡಿ ಸಂಪುಟ ಸೇರಿದ್ದರು. ಈ ಅವಧಿಯಲ್ಲಿ ಇಬ್ಬರಿಗೂ ಮಂತ್ರಿ ಸ್ಥಾನ ಕೊಟ್ಟರೂ ಅಚ್ಚರಿಯಿಲ್ಲ. ನಮ್ಮ ಕಾರ್ಯಕರ್ತರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ’ ಎಂದು ಅಪ್ಪಚ್ಚು ರಂಜನ್‌ ‘ಪ್ರಜಾವಾಣಿ’ಗೆ ವಿಶ್ವಾಸ ವ್ಯಕ್ತಪಡಿಸಿದರು.

‘ಅಪ್ಪಚ್ಚು ರಂಜನ್‌ ಅವರು ಆರ್‌.ಅಶೋಕ್‌, ಕೆ.ಎಸ್.ಈಶ್ವರಪ್ಪ ಹಾಗೂ ಸಿ.ಟಿ.ರವಿ ಅವರೊಂದಿಗೆ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಆ ಮುಖಂಡರ ಪ್ರಯತ್ನದಿಂದಲೂ ರಂಜನ್‌ಗೆ ಸಚಿವ ಸಿಗುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.

ಐದು ಬಾರಿ ಶಾಸಕ:1994, 1999, 2008, 2013 ಹಾಗೂ 2018ರ ಚುನಾವಣೆಯಲ್ಲಿ ಸೇರಿ ಒಟ್ಟು ಐದು ಬಾರಿ ರಂಜನ್‌ ಶಾಸಕರಾಗಿದ್ದರು. ಅದೂ ಸಹ ರಂಜನ್‌ಗೆ ಪ್ಲಸ್‌ ಆಗಬಹುದು.

ಬೋಪಯ್ಯಗೆ ಯಾವುದೆಲ್ಲಾ ಪ್ಲಸ್‌?:ಕೆ.ಜಿ. ಬೋಪಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ. ಅದೇ ಕಾರಣದಿಂದ ಬೋಪಯ್ಯ ಸಚಿವ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾರಣಕ್ಕೆ ಬೋಪಯ್ಯ ಸ್ಪೀಕರ್‌ ಹುದ್ದೆ ಬೇಡ ಎಂದಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದಾಗ ಬೋಪಯ್ಯ ವಿಧಾನಸಭೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಡಾಯ ಎದ್ದಿದ್ದ ಕೆಲವು ಶಾಸಕರನ್ನು ಅನರ್ಹಗೊಳಿಸಿದ್ದರು. ಅದು ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿತ್ತು.

2004ರಲ್ಲಿ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಿಂದ ಬೋಪಯ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಮಡಿಕೇರಿಯಿಂದ ವಿರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿದ್ದ ಅವರು, ಅಲ್ಲಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದ್ದಾರೆ (2008, 2013 ಹಾಗೂ 2018ರ ಚುನಾವಣೆ). ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅದೇ ಕಾರಣಕ್ಕೆ ಅವರೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.