ADVERTISEMENT

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಬೇಡ

ಅಂಗನವಾಡಿ ನೌಕರರ ಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2019, 12:35 IST
Last Updated 27 ಮೇ 2019, 12:35 IST

ಮಡಿಕೇರಿ: ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಕೈಬಿಡಬೇಕು ಎಂದು ಅಂಗನವಾಡಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರ ಈ ಆದೇಶವನ್ನು ಪರಿಶೀಲಿಸಿ, ಅಗತ್ಯ ಮಾರ್ಪಡುಗಳನ್ನು ಮಾಡಬೇಕೆಂದು ಒತ್ತಾಯಿಸಿದೆ.

ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ, ಅಂಗನವಾಡಿಗಳಿಗೆ ಮಕ್ಕಳೇ ಆಗಮಿಸುವುದಿಲ್ಲ. ಇದರಿಂದ ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳ ಬದುಕಿಗೆ ಹೊಡೆತ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು.

ADVERTISEMENT

ಸರ್ಕಾರ ಈ ಆದೇಶವನ್ನು ಜಾರಿಗೆ ತರುವ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ, ಶಿಕ್ಷಣ ತಜ್ಞರೊಂದಿಗೆ ಚರ್ಚೆ ಮಾಡಬೇಕು. ಆದರೆ ಸರ್ಕಾರ ಇದಾವುದನ್ನೂ ಮಾಡದೇ ಸುತ್ತೋಲೆಯನ್ನು ಹೊರಡಿಸಿದೆ. ಇದರಿಂದ ಅಂಗನವಾಡಿ ನೌಕರರ ಬದುಕು ಬೀದಿಗೆ ಬೀಳುತ್ತದೆ ಎಂದರು.

ಅಂಗನವಾಡಿ ಕೇಂದ್ರದಲ್ಲಿ ನಡೆಯುತ್ತಿರುವ ಮಾತೃಪೂರ್ಣ ಕೆಲಸಕ್ಕೆ ಹೆಚ್ಚುವರಿಯಾಗಿ ಒರ್ವ ಸಹಾಯಕಿಯನ್ನು ನೇಮಿಸಬೇಕು, ಇನ್ನು 1995 ರಿಂದ ಆಯ್ಕೆಯಾದ ಕಾರ್ಯಕರ್ತೆಯರು, ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿರುವವರು. ಈ ಸಿಬ್ಬಂದಿಗೇ ಎಲ್‌ಕೆಜಿ, ಯುಕೆಜಿಯಲ್ಲಿ ಪಾಠ ಪ್ರವಚನ ಮಾಡಲು ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರ್ಕಾರಿ ಸೌಲಭ್ಯ ಘೋಷಿಸಬೇಕು, ಖಾಸಗಿ ಕಾನ್ವೆಂಟ್ ಮತ್ತು ಶಾಲೆಗೆ ಕೊಡುವ ಅನುಮತಿಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಘ ಮೇ. 30 ರಂದು ಬೆಂಗಳೂರಿನ ವಿಧಾನಸೌಧ ಚಲೋ ನಡೆಸಲಿದ್ದು, ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಸ್ .ಸುಮಿತ್ರ ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ ಬಿ.ಸಿ. ನಳಿನಾಕ್ಷಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.