ADVERTISEMENT

ಸಿದ್ದಾಪುರ: ಪ್ರವಾಹ ಸಂತ್ರಸ್ತರ ಅಹೋರಾತ್ರಿ ಹೋರಾಟ

ಪ್ರತಿಭಟನಾ ಸ್ಥಳದಲ್ಲೇ ಅಡುಗೆ, ಊಟ, ನಿದ್ರೆ... ಜಿಲ್ಲಾಡಳಿತದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 13:17 IST
Last Updated 10 ಫೆಬ್ರುವರಿ 2020, 13:17 IST
ಪ್ರತಿಭಟನಾನಿರತ ಸಂತ್ರಸ್ತರು
ಪ್ರತಿಭಟನಾನಿರತ ಸಂತ್ರಸ್ತರು   

ಸಿದ್ದಾಪುರ: ಪ್ರವಾಹ ಸಂತ್ರಸ್ತರಿಗೆ ಶಾಶ್ವತ ನಿವೇಶನ ಒದಗಿಸಿಕೊಡಬೇಕೆಂದು ಒತ್ತಾಯಿಸಿ, ಗುಹ್ಯ ಹಾಗೂ ಕರಡಿಗೋಡುವಿನ ಸಂತ್ರಸ್ತರಿಂದ ಅಹೋರಾತ್ರಿ ಹೋರಾವು ಸೋಮವಾರಿಂದ ಆರಂಭವಾಗಿದೆ.

ಸಿದ್ದಾಪುರ ಗ್ರಾ.ಪಂ ಮುಂಭಾಗಕ್ಕೆ ಜಮಾಯಿಸಿದ ಸಂತ್ರಸ್ತರು, ಗ್ರಾ.ಪಂ ಮುಂಭಾಗದಲ್ಲೇ ಪೆಂಡಲ್ ಹಾಕಿ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಹಿರಿಯ ನಾಗರಿಕರು ಹಾಗೂ ಸಂತ್ರಸ್ತ ಮಹಿಳೆ ವಳ್ಳಿಯಮ್ಮ ಗಿಡಕ್ಕೆ ನೀರೆರೆದು ಪ್ರತಿಭಟನೆಗೆ ಚಾಲನೆ ನೀಡಿದರು.

ಸಂತ್ರಸ್ತರ ಹೋರಾಟ ಸಮಿತಿಯ ಪ್ರಮುಖರಾದ ಎಂ.ಎ.ಯಮುನಾ ಮಾತನಾಡಿ, ಸೆಪ್ಟೆಂಬರ್‌ನಲ್ಲಿ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಯ ಸಂದರ್ಭ ಜಿಲ್ಲಾಧಿಕಾರಿ ಅವರು ಮೂರು ತಿಂಗಳ ಕಾಲಾವಕಾಶವನ್ನು ಕೋರಿದ್ದರು. ಆದರೆ ಇದೀಗ ಐದು ತಿಂಗಳಾದರೂ ಸಂತ್ರಸ್ತರಿಗೆ ಶಾಶ್ವತ ನಿವೇಶನ ಒದಗಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ADVERTISEMENT

ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗೆ ನೀಡಿದ ಪರಿಹಾರದಲ್ಲಿ ತಾರತಮ್ಯವಾಗಿದೆ. ಸಂತ್ರಸ್ತ ಎಲ್ಲಾ ಕುಟುಂಬಗಳಿಗೂ ಸಮರ್ಪಕವಾಗಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೇ ಕೂಡಲೇ ಪುನರ್ವಸತಿ ಕಲ್ಪಿಸದಿದ್ದಲ್ಲಿ ಅಹೋರಾತ್ರಿ ಹೋರಾಟವನ್ನು ಮುಂದುವರೆಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರ ನಿವೇಶನದ ಪಟ್ಟಿಯನ್ನು ಮಾಡಿದ್ದು, ಈ ಪಟ್ಟಿಯಲ್ಲಿ ಲೋಪದೋಷಗಳು ಕಂಡು ಬಂದಿದ್ದು, ಇದನ್ನು ಸರಿಪಡಿಸಬೇಕೆಂದು ತಿಳಿಸಿದರು.

ಸಮಿತಿಯ ಪ್ರಮುಖರಾದ ಸಿ.ಯು ಮುಸ್ತಫ ಮಾತನಾಡಿ, ವಿರಾಜಪೇಟೆ ತಾಲ್ಲೂಕಿನಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಎನ್.ಡಿ.ಆರ್.ಎಫ್ ನಿಂದ ಬಂದ ₹ 1 ಕೋಟಿ ಹಣ ವಾಪಾಸ್ಸಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೆಡ್‍ಗಳಲ್ಲಿ ದಿನ ದೂಡುತ್ತಿದ್ದಾರೆ. ಮತ್ತೊಂದು ಮಳೆಗಾಲ ಸಮೀಪಿಸುತ್ತಿದ್ದು, ಸಂತ್ರಸ್ತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಂತ್ರಸ್ತರಿಗೆ ಬಾಡಿಗೆ ಹಣವಾಗಿ ಪ್ರತಿ ತಿಂಗಳು ₹ 5 ಸಾವಿರ ನೀಡುವುದಾಗಿ ಘೋಷಿಸಿದ್ದು, ಈವರೆಗೂ ಹಣ ಬಂದಿಲ್ಲ ಎಂದು ಆರೋಪಿಸಿದರು.

ಒಡಿಪಿ ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಾಯಿಸ್ ಮೆನೆಜಸ್ ಮಾತನಾಡಿ, ಮನೆ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಜಿಲ್ಲಾಡಳಿತ ವತಿಯಿಂದ ಕೂಡಲೇ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ನದಿ ತೀರದಲ್ಲಿ ಬಡ ವರ್ಗದವರು ವಾಸ ಮಾಡಿಕೊಂಡಿದ್ದು ಪ್ರವಾಹದ ಸಂದರ್ಭದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ತೊಂದರೆಗೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿಳಂಬ ನೀತಿಯನ್ನು ಅನುಸರಿಸದೇ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವಂತೆ ತಿಳಿಸಿದರು.

ಅಲ್ಲದೇ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.

ಪ್ರತಿಭಟನೆ ಸಭೆಯಲ್ಲಿ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಬೈಜು, ಕೃಷ್ಣ, ಹಸ್ಸನ್, ಒ.ಡಿ.ಪಿ. ಸಂಸ್ಥೆಯ ವಿಜಯ ನಾರಾಯಣ, ಆದಿವಾಸಿ ಸಮನ್ವಯ ಸಮಿತಿಯ ಅಧ್ಯಕ್ಷ ವೈ.ಕೆ. ಕೃಷ್ಣ, ಹಾಗೂ ಸಿದ್ದಾಪುರ ಗ್ರಾ.ಪಂ ಸದಸ್ಯರುಗಳು ಹಾಗೂ ವಿವಿಧ ಮಹಿಳೆ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.