ADVERTISEMENT

ದೊಡ್ಡಬಳ್ಳಾಪುರ: ಸಂಸ್ಕರಿಸದ ತ್ಯಾಜ್ಯ ನೀರು ಕೆರೆಗಳ ಸೇರದಂತೆ ಕ್ರಮಕ್ಕೆ ಸಲಹೆ

ಎನ್‌ಜಿಟಿ ರಚಿಸಿದ್ದ ಜಂಟಿ ಸಮಿತಿಯ ವರದಿಯಲ್ಲಿ ಹಲವು ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 16:05 IST
Last Updated 6 ಡಿಸೆಂಬರ್ 2022, 16:05 IST
ಎನ್‌ಜಿಟಿ
ಎನ್‌ಜಿಟಿ    

ನವದೆಹಲಿ: ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಚಿಕ್ಕತುಮಕೂರು ಕೆರೆ ಹಾಗೂ ನಾಗರಕೆರೆಗೆ ಸಂಸ್ಕರಿಸದ ತ್ಯಾಜ್ಯ ನೀರು ಸೇರುವುದನ್ನು ತಡೆಯುವ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎನ್‌ಜಿಟಿ ರಚಿಸಿದ್ದ ಜಂಟಿ ಸಮಿತಿ ಸಲಹೆ ನೀಡಿದೆ.

ಈ ಕೆರೆಗಳಿಗೆ ಸೇರುವ ಒಳಚರಂಡಿ ನೀರನ್ನು ಸಂಸ್ಕರಿಸುವ ಸಲುವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

ಈ ಎರಡು ಕೆರೆಗಳ ಮಾಲಿನ್ಯ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ಪೀಠ, ಈ ಜಂಟಿ ಸಮಿತಿಯನ್ನು ರಚಿಸಿತ್ತು.

ADVERTISEMENT

‘ಮನೆಗಳ ಹಾಗೂ ನಗರಸಭೆಯ ತ್ಯಾಜ್ಯ ನೀರಿನ ಸಂಸ್ಕರಣೆಯಾಗುತ್ತಿಲ್ಲ. ಈ ತ್ಯಾಜ್ಯ ನೀರು ಜಲಕಾಯಗಳನ್ನು ಸೇರುತ್ತಿರುವುದರಿಂದ ಕೆರೆಗಳು ಮಲಿನಗೊಳ್ಳುತ್ತಿವೆ. ಇದನ್ನು ತಪ್ಪಿಸಲು ತುರ್ತಾಗಿ ಎಸ್‌ಟಿಪಿಗಳನ್ನು ಸ್ಥಾಪಿಸಬೇಕು’ ಎಂದು ಜಂಟಿ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

‘ಕೆರೆಗಳು ಮಲಿನಗೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಕೆಲ ಒಳಚರಂಡಿ ಮಾರ್ಗಗಳನ್ನು ಸ್ಥಳಾಂತರಿಸಬೇಕು’ ಎಂದೂ ಸಮಿತಿ ಶಿಫಾರಸು ಮಾಡಿದೆ.

ಚಿಕ್ಕತುಮಕೂರು ಕೆರೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಬೇಶೆಟ್ಟಿಹಳ್ಳಿ ಪಟ್ಟಣದ ಹತ್ತಿರ ಇದೆ. 33 ಎಕರೆ ವಿಸ್ತೀರ್ಣವಿರುವ ಈ ಕೆರೆಗೆ ಪಟ್ಟಣದ ತ್ಯಾಜ್ಯ ನೀರು ಸೇರುತ್ತಿದೆ. ನಾಗರಕೆರೆಯು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿದ್ದು, 185 ಎಕರೆ ವಿಸ್ತೀರ್ಣ ಇದೆ. ನಗರದ ತ್ಯಾಜ್ಯ ನೀರು ಈ ಕೆರೆ ಸೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.