ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)
ಪ್ರಜಾವಾಣಿ ವಾರ್ತೆ
ನವದೆಹಲಿ: ಮಾಲಿನ್ಯ ಉಂಟು ಮಾಡಿದ ಕಾರಣಕ್ಕೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ವಿನೀರ್ ಎಂಜಿನಿಯರಿಂಗ್ ಲಿಮಿಟೆಡ್‌ಗೆ ₹2.33 ಕೋಟಿ ದಂಡ ವಿಧಿಸಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಚೆನ್ನೈ ಪೀಠ ತಡೆ ನೀಡಿದೆ.
ಮೇಲ್ಮನವಿದಾರರ ವಿಚಾರಣೆ ನಡೆಸದೆ ಮಂಡಳಿ ದಂಡ ವಿಧಿಸಿದ್ದು ಸರಿಯಲ್ಲ. ಮೇಲ್ಮನವಿದಾರರಿಗೆ ಹೊಸದಾಗಿ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು. ಈ ಪ್ರಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಾಟಿ ಅವರಿದ್ದ ಪೀಠವು ನಿರ್ದೇಶನ ನೀಡಿದೆ.
ಜಲ ಹಾಗೂ ವಾಯುಮಾಲಿನ್ಯ ಉಂಟು ಮಾಡಿದ ಕಾರಣಕ್ಕೆ ಈ ಕಂಪನಿಗೆ ಪರಿಸರ ಪರಿಹಾರ ರೂಪದಲ್ಲಿ ಮಂಡಳಿಯು ₹1 ಕೋಟಿ ದಂಡವನ್ನು 2020ರಲ್ಲಿ ವಿಧಿಸಿತ್ತು. ಮಂಡಳಿಯು 2023ರಲ್ಲಿ ಮತ್ತೆ ₹97 ಲಕ್ಷ ಪಾವತಿಸುವಂತೆ ಕಂಪನಿಗೆ ನೋಟಿಸ್ ನೀಡಿತ್ತು. ಮಾಲಿನ್ಯ ಉಂಟು ಮಾಡಿಲ್ಲ ಎಂದು ಕಂಪನಿ ಸಮಜಾಯಿಷಿ ನೀಡಿತ್ತು. ಮಂಡಳಿಯು 2024ರ ಜನವರಿಯಲ್ಲಿ ಮತ್ತೊಂದು ನೋಟಿಸ್ ಕೊಟ್ಟಿತ್ತು. ‘ಈ ಹಿಂದೆ ಮಧ್ಯಂತರ ಪರಿಸರ ಪರಿಹಾರ ವಿಧಿಸಲಾಗಿತ್ತು. ಈಗ ಸಮಗ್ರ ಮೌಲ್ಯಮಾಪನ ಮಾಡಿ ದಂಡವನ್ನು ಲೆಕ್ಕ ಹಾಕಲಾಗಿದೆ. ಕಂಪನಿಯು ₹2.33 ಕೋಟಿ ದಂಡ ಪಾವತಿಸಬೇಕು’ ಎಂದು ಮಂಡಳಿಯು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಎನ್‌ಜಿಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.