ADVERTISEMENT

‍ಪ್ರಾಸಿಕ್ಯೂಟರ್‌ ಆಯ್ಕೆ: ಎನ್‌ಐಎ–ಸಿಬಿಐ ಗುಣಮಟ್ಟದ ತನಿಖೆ...

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 15:43 IST
Last Updated 14 ಆಗಸ್ಟ್ 2025, 15:43 IST
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ಆಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಮತ್ತು ಸೆಷನ್ಸ್‌ ಹಾಗೂ ಹೈಕೋರ್ಟ್‌ಗಳಲ್ಲಿ ವಾದ ಮಂಡಿಸುತ್ತಿರುವ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ಆಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಮತ್ತು ಸೆಷನ್ಸ್‌ ಹಾಗೂ ಹೈಕೋರ್ಟ್‌ಗಳಲ್ಲಿ ವಾದ ಮಂಡಿಸುತ್ತಿರುವ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್.   

ಬೆಂಗಳೂರು: ಕ್ರಿಮಿನಲ್‌ ಪ್ರಕರಣಗಳಲ್ಲಿ ಅಪರಾಧಿಗಳನ್ನು ಕೂಡಲೇ ‍ಪತ್ತೆಹಚ್ಚಲು ಮತ್ತು ಅಗತ್ಯವಾದ ನಿಖರ ಸಾಕ್ಷ್ಯಗಳನ್ನು ಕಲೆಹಾಕಲು ಆ್ಯಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳು ಈ ದಿನಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನೂಹ್ಯ ನೆರವು ನೀಡುತ್ತಿವೆ. ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಇದು ಸಾಬೀತಾಗಿದೆ.

ಇದೀಗ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲೂ ಪ್ರಾಸಿಕ್ಯೂಷನ್‌ ಪಾಲಿಗೆ ಡಿಜಿಟಲ್‌ ಸಾಕ್ಷ್ಯ ಮಹತ್ವದ ವರವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ, ಪ್ರಾಸಿಕ್ಯೂಟರ್‌ಗಳ ಆಯ್ಕೆಯಲ್ಲಿ ಸರ್ಕಾರ ವಹಿಸಿದ ವಿಶೇಷ ಮುತುವರ್ಜಿ ಫಲ ನೀಡಿದೆ.

  * ಈ ಪ್ರಕರಣದಲ್ಲಿ 1ನೇ ಆರೋಪಿ ಪವಿತ್ರಾ ಗೌಡ ಮತ್ತು 2ನೇ ಆರೋಪಿ ನಟ ದರ್ಶನ್‌ ಅವರನ್ನು 2024ರ ಜೂನ್‌ 11ರಂದು ಬಂಧಿಸಲಾಗಿತ್ತು. ಇದರಲ್ಲಿ 17 ಜನ ಆರೋಪಿಗಳಿದ್ದಾರೆ. ಆರೋಪಿಗಳು ನಂತರದ ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರತ್ಯಕ್ಷ ಸೇರಿದಂತೆ ಒಟ್ಟು 272 ಜನ ಸಾಕ್ಷಿಗಳಿದ್ದಾರೆ.

ADVERTISEMENT

* ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮತ್ತು ಸಿಬಿಐ (ಕೇಂದ್ರೀಯ ತನಿಖಾ ದಳ) ಪರ ಹೈಕೋರ್ಟ್‌ ಮತ್ತು ವಿಚಾರಣಾ ಕೋರ್ಟ್‌ಗಳಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಸರ್ಕಾರ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಆಗಿ 2024ರ ಜೂನ್‌ 15ರಂದು ನೇಮಕ ಮಾಡಿದೆ. ಅಂತೆಯೇ, ಆರೋಪಿಗಳ ಜಾಮೀನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ವಾದ ಮಂಡಿಸಿರುವ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು ಕ್ರಿಮಿನಲ್‌ ಮತ್ತು ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಹೆಸರುವಾಸಿ.

* ರಾಜ್ಯ ಪೊಲೀಸರ ತನಿಖಾ ಕಾರ್ಯ ವೈಖರಿಗೆ ಭಿನ್ನವಾದ ಪ್ರಾಸಿಕ್ಯೂಷನ್‌ ಕಾರ್ಯ ವಿಧಾನಗಳನ್ನು ಅಂದರೆ ಎನ್‌ಐಎ ಮತ್ತು ಸಿಬಿಐ ಗುಣಮಟ್ಟದ ತನಿಖಾ ಶೈಲಿಯನ್ನು ಈ ಪ್ರಕರಣದಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರಾಸಿಕ್ಯೂಷನ್‌ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಮೂಲಕ ಜಾಮೀನು ರದ್ದುಪಡಿಸುವ ನಿಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ಗೆ ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಏನೇನೆಲ್ಲಾ ಇದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದೆ. 

* ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳ 10ನೇ ತಾರೀಖಿಗೆ ಸೆಷನ್ಸ್‌ ನ್ಯಾಯಾಲಯದಲ್ಲಿ ಮುದ್ದತು ನಿಗದಿಯಾಗಿದೆ. ಅಂದು ಕೋರ್ಟ್‌ನಲ್ಲಿ ದೋಷಾರೋಪ ಹೊರಿಸುವ ಮುನ್ನಿನ ಪ್ರಕ್ರಿಯೆ ನಡೆಯುತ್ತದೆ. ‘ನೀವು ತಪ್ಪು ಮಾಡಿದ್ದೀವಿ ಎಂಬುದನ್ನು ಒಪ್ಪಿಕೊಳ್ಳುತ್ತೀರೋ ಅಥವಾ ಕೇಸನ್ನು ನಡೆಸಿ, ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸುತ್ತೀರಾ’ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಎಲ್ಲ ಆರೋಪಿಗಳಿಂದ ಪಡೆಯಲಾಗುವ ಉತ್ತರವನ್ನು ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973) ಕಲಂ 227ರ ಅಡಿಯಲ್ಲಿ ಅಧಿಕೃತ ಹೇಳಿಕೆಯ ಮುಖಾಂತರ ದಾಖಲು ಮಾಡಿಕೊಳ್ಳುವ ನ್ಯಾಯಾಧೀಶರು ಪ್ರಕರಣವನ್ನು ಮುಂದಿನ ನ್ಯಾಯಿಕ ವಿಚಾರಣೆಗೆ ಅಣಿಗೊಳಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.