ಹೈಕೋರ್ಟ್
ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ 111 ಕಿ.ಮೀ ಉದ್ದದಲ್ಲಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ (ನೈಸ್) ವತಿಯಿಂದ ನಿರ್ಮಿಸಲಾಗಿರುವ ಹೆದ್ದಾರಿ ಮೆಗಾ ಯೋಜನೆಗೆ ಕೆಐಎಡಿಬಿ ವಶಪಡಿಸಿಕೊಂಡಿದ್ದ 300 ಎಕರೆಗೂ ಹೆಚ್ಚು ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಧಿಸೂಚನೆ ಪ್ರಶ್ನಿಸಿ ಪಿ.ಶ್ರೀಧರಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಕುರಿತಂತೆ ಆದೇಶಿಸಿದೆ.
‘ಜಮೀನು ವಶಪಡಿಸಿಕೊಂಡು 23 ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೂ ಅರ್ಜಿದಾರರಿಗೆ ಪರಿಹಾರ ವಿತರಣೆ ಮಾಡಿಲ್ಲ’ ಎಂಬ ಆಕ್ಷೇಪವನ್ನು ಪರಿಗಣಿಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಇದೇ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಮತ್ತು ಸುಪ್ರೀಂ ಕೋರ್ಟ್ ಪೂರ್ವ ನಿದರ್ಶನ ತೀರ್ಪುಗಳ ಆಧಾರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ (ಬಿಎಂಐಸಿಪಿ), ಎಕ್ಸ್‌ಪ್ರೆಸ್ ವೇ, ಟೋಲ್ ಪ್ಲಾಜಾ ಅಥವಾ ಪೆರಿಫೆರಲ್ ರಸ್ತೆ ಬಳಕೆಯ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಭೂ ಸ್ವಾಧೀನ ಅಧಿಕಾರಿ 1998ರಿಂದ 2009ರ ನಡುವೆ ಅರ್ಜಿದಾರ ಭೂ ಮಾಲೀಕರಿಂದ 300 ಎಕರೆಗೂ ಹೆಚ್ಚು ಜಮೀನು ವಶಪಡಿಸಿಕೊಳ್ಳಲು ವಿವಿಧ ದಿನಾಂಕಗಳಲ್ಲಿ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿದ್ದರು.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಚ್.ಎನ್.ಶಶಿಧರ ಅವರ ನೇತೃತ್ವದಲ್ಲಿ ವಕೀಲರ ತಂಡ ವಾದ ಮಂಡಿಸಿತ್ತು. ಹೈಕೋರ್ಟ್ ವಕೀಲ ಎಚ್.ಎಸ್.ಸುಹಾಸ್ ಮತ್ತು ಇತರರು ವಕಾಲತ್ತು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.