ADVERTISEMENT

ನಿಗಮ ಮಂಡಳಿ: ‘ದೋಸ್ತಿ’ ಮಧ್ಯೆ ಕುಸ್ತಿ

‘ಕೈ’ ವರಿಷ್ಠರ ಶಿಫಾರಸಿಗೆ ಅನುಮೋದನೆ ನೀಡಲು ಸಿ.ಎಂ ನಿರಾಕರಣೆ?

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:03 IST
Last Updated 28 ಡಿಸೆಂಬರ್ 2018, 20:03 IST
   

ಬೆಂಗಳೂರು: ಸಂಪುಟ ಪುನಾರಚನೆ, ಖಾತೆ ಹಂಚಿಕೆ ಬಿಕ್ಕಟ್ಟಿನಿಂದ ಹೊರ ಬಂದ ಬೆನ್ನಲ್ಲೇ, ನಿಗಮ– ಮಂಡಳಿ ನೇಮಕ ವಿಷಯ ಕಾಂಗ್ರೆಸ್‌ ನಾಯಕರನ್ನು ಈಗ ಇಕ್ಕಟ್ಟಿಗೆ ಸಿಲುಕಿಸಿದೆ.

ನಿಗಮ- ಮಂಡಳಿ ಹಂಚಿಕೆ ವಿಚಾರದಲ್ಲಿ ‘ದೋಸ್ತಿ’ಗಳ (ಕಾಂಗ್ರೆಸ್- ಜೆಡಿಎಸ್) ಮಧ್ಯೆ ಹಗ್ಗಜಗ್ಗಾಟ ಆರಂಭವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮಾಡಿದ ಶಿಫಾರಸಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನುಮೋದನೆ ನೀಡಲು ಹಿಂದೇಟು ಹಾಕಿದ್ದಾರೆ.

ತಮ್ಮ ಪಾಲಿಗೆ ಹಂಚಿಕೆಯಾದ ನಿಗಮ–ಮಂಡಳಿಗಳಿಗೆ, ಸಂಪುಟ ಪುನಾರಚನೆ ಸಂದರ್ಭದಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ಹೆಸರುಗಳನ್ನು ಸೂಚಿಸಿತ್ತು. ಆದರೆ, ಈ ಪಟ್ಟಿಯಲ್ಲಿರುವ ಕೆಲವು ಹೆಸರುಗಳಿಗೆ ಕುಮಾರಸ್ವಾಮಿ ಮತ್ತು ಸಂಪುಟದಲ್ಲಿರುವ ಜೆಡಿಎಸ್‌ ಸಚಿವರು ತಕರಾರು ಎತ್ತಿದ್ದಾರೆ.

ADVERTISEMENT

‘ನಮ್ಮ ಬಳಿ ಚರ್ಚಿಸದೇ ಕಾಂಗ್ರೆಸ್ ಏಕಾಏಕಿ ತೀರ್ಮಾನ ಮಾಡಿದೆ’ ಎಂಬುದು ಜೆಡಿಎಸ್ ನಾಯಕರ ಆರೋಪ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್‌), ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ಸೇರಿದಂತೆ ಕೆಲವು ನಿಗಮ- ಮಂಡಳಿಯನ್ನು ತಮ್ಮ ಪಕ್ಷಕ್ಕೆ ನೀಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಸಚಿವರು ಹೊಂದಿರುವ ಖಾತೆಗಳ ಅಧೀನದಲ್ಲಿರುವ ನಿಗಮಗಳಿಗೆ, ಕಾಂಗ್ರೆಸ್‌ ಶಾಸಕರನ್ನು ನೇಮಿಸಿರುವುದೂ ಮೈತ್ರಿ ಮಧ್ಯೆ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷಕ್ಕೆ ಹಂಚಿಕೆಯಾಗಿರುವ ನಿಗಮ- ಮಂಡಳಿಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಜೆಡಿಎಸ್‌ ಬಳಿ ಯಾವುದೂ ಇಲ್ಲ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಟ್ಟುಕೊಡುವಂತೆ ಜೆಡಿಎಸ್ ಆಗ್ರಹಿಸಿದೆ ಎನ್ನಲಾಗಿದೆ.

ಈ ಮಧ್ಯೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಡಾ. ಸುಧಾಕರ್‌ ಹೆಸರು ಕೈ ಬಿಡುವಂತೆ ಕಾಂಗ್ರೆಸ್‌ ಮೇಲೆ ಮುಖ್ಯಮಂತ್ರಿ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿಯೂ ಇದೆ. ಇದರಿಂದ ಸುಧಾಕರ್‌ ಗರಂ ಆಗಿದ್ದಾರೆ.

‘ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಬಂದರೆ ಹೈಕಮಾಂಡ್‌ ಜೊತೆ ಚರ್ಚಿಸುತ್ತೇನೆ’ ಎಂದು ಸುಧಾಕರ್‌ ಹೇಳಿದರು.

‘ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಜೊತೆ ಮಾತನಾಡುವವರೆಗೆ ಈ ಮಾಹಿತಿ ಅಧಿಕೃತವಲ್ಲ’ ಎಂದೂ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನಿಗಮ ಮಂಡಳಿ ಸ್ಥಾನ ಹಂಚಿಕೆ ವಿಷಯದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಮುಖ್ಯಮಂತ್ರಿ ನಡೆದುಕೊಳ್ಳಬೇಕು. ನನ್ನ‌ನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಖ್ಯಮಂತ್ರಿ ಯಾಕೆ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷದ ನಾಯಕರೇ ನನಗೆ ಹುದ್ದೆ ನೀಡಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಅವರನ್ನು ಈವರೆಗೆ ನಾನು ಎರಡು ಬಾರಿ‌ ಭೇಟಿ ಮಾಡಿದ್ದೇನೆ. ನಾನು ಅವರಿಗೆ ಅನ್ಯಾಯ ಮಾಡಿಲ್ಲ’ ಎಂದೂ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಪರಮೇಶ್ವರ ಖಾತೆ ಬದಲು ಸರಿಯಲ್ಲ: ಎಚ್‌.ಡಿ.ರೇವಣ್ಣ

ಕಾಂಗ್ರೆಸ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಿಸಿಕೊಳ್ಳುವಷ್ಟು ಸಹಿಸಿಕೊಳ್ಳುತ್ತಾರೆ. ಅವರೇನೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ’ ಎಂದರು.

‘ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಏನು ಕಾರಣ ಎಂಬುದು ಗೊತ್ತಿಲ್ಲ. ಉಪಮುಖ್ಯಮಂತ್ರಿ ಪರಮೇಶ್ವರ ಖಾತೆ ಬದಲಾವಣೆಯಲ್ಲಿ ನನ್ನ ಪಾತ್ರ ಇಲ್ಲ’ ಎಂದು ತಿಳಿಸಿದರು.

‘ಪರಮೇಶ್ವರ ದಲಿತ ಸಮುದಾಯಕ್ಕೆ ಸೇರಿದವರು. ಚೆನ್ನಾಗಿ ಖಾತೆ ನಿರ್ವಹಿಸಿದ್ದಾರೆ. 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಖಾತೆ ಬದಲಿ
ಸಿದ್ದು ಸರಿಯಲ್ಲ. ಅವರನ್ನು ತುಳಿಯುವುದು ಒಳ್ಳೆಯದಲ್ಲ. ಕಾಂಗ್ರೆಸ್‌ ಮುಖಂಡರೇ ಸಂಚು ನಡೆಸಿ ಈ ಕೆಲಸ ಮಾಡಿದ್ದಾರೆ ಎಂದರು.

* ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರಲ್ಲ. ಯಾವ ಹೆಜ್ಜೆ ಇಡುತ್ತೇನೆ ಎನ್ನುವುದನ್ನು ಮುಂದೆ ತಿಳಿಸುತ್ತೇನೆ

ಡಾ. ಸುಧಾಕರ್,ಕಾಂಗ್ರೆಸ್‌ ಶಾಸಕ

* ಕೆಆರ್‌ಡಿಎಲ್‌ಗೆ ಕಾಂಗ್ರೆಸ್‌ ಶಾಸಕರನ್ನು ನೇಮಕ ಮಾಡಲು ಮುಂದಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಒಪ್ಪಿಗೆ ಇಲ್ಲದೆ ಹೇಗೆ ನೇಮಕ ಮಾಡುತ್ತಾರೆ?

–ರೇವಣ್ಣ,ಲೋಕೋಪಯೋಗಿ ಸಚಿವ
* ನಿಗಮ –ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ತೀರ್ಮಾನ ಮಾಡುತ್ತೇವೆ. ಎಲ್ಲವೂ ಸುಗಮವಾಗಿ ನಡೆಯಲಿದೆ

ಎಚ್‌.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ
* ಓಹೊ. ರೇವಣ್ಣ ಹಂಗದ್ನ. ರೇವಣ್ಣ ನನ್ನ ಬಗ್ಗೆ ಕೇಳಿದರೆ ಮಾತ್ರ ಪ್ರತಿಕ್ರಿಯಿಸುತ್ತೇನೆ.

ಸಿದ್ದರಾಮಯ್ಯ,ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.