ADVERTISEMENT

ಮಂಡ್ಯದಿಂದ ನಿಖಿಲ್‌ ಕಣಕ್ಕೆ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 20:07 IST
Last Updated 3 ಮಾರ್ಚ್ 2019, 20:07 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಮಂಗಳೂರು/ ಶಿವಮೊಗ್ಗ: ‘ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುಳಿವನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ನಡೆದ ಉಪ‌ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಮ್ಮ ಪಕ್ಷದ ಎಲ್.ಆರ್.ಶಿವರಾಮೇಗೌಡ ಆಯ್ಕೆಯಾಗಿದ್ದರು. ಆದರೆ, ಸ್ಥಳೀಯರು ನಿಖಿಲ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವನೂ ಆಕಾಂಕ್ಷಿಯಾಗಿದ್ದಾನೆ. ಮನಸ್ಸಿದ್ದರೆ ಸ್ಪರ್ಧಿಸುವಂತೆ ನಾನೂ ಸಮ್ಮತಿ ಸೂಚಿಸಿದ್ದೇನೆ' ಎಂದರು.

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಟಿಕೆಟ್ ಆಕಾಂಕ್ಷಿಯಾಗಿರುವ ಕುರಿತು ಕೇಳಿದಾಗ, ‘ಆಕಾಂಕ್ಷೆ ಇರುವುದು ಸ್ವಾಭಾವಿಕ. ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳು ಮೊದಲಿನಿಂದಲೂ ಜೆಡಿಎಸ್ ಪಕ್ಷದ ಹಿಡಿತದಲ್ಲೇ ಇವೆ' ಎಂದರು.

ADVERTISEMENT

‘ಪ್ರಜ್ವಲ್ ರೇವಣ್ಣ ಕೆಲವು ವರ್ಷಗಳಿಂದ ಲೋಕಸಭಾ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದಾನೆ. ಹಲವು ಚುನಾವಣೆಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದಾನೆ. ಅವನಿಗೆ ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಬಲವಾದ ಆಸಕ್ತಿ ಇದೆ’ ಎನ್ನುವ‌ ಮೂಲಕ ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆಯ ಸುಳಿವನ್ನೂ ನೀಡಿದರು.

12 ಕ್ಷೇತ್ರಗಳಿಗೆ ಬೇಡಿಕೆ: 'ಲೋಕಸಭಾ ಚುನಾವಣೆ ಸ್ಥಾನಗಳ ಹಂಚಿಕೆಯಲ್ಲಿ ಜೆಡಿಎಸ್‌ಗೆ 12 ಕ್ಷೇತ್ರಗಳನ್ನು ನೀಡುವಂತೆ ಕೇಳಿದ್ದೇನೆ. ಅಷ್ಟನ್ನು ಕೊಡಲೇಬೇಕು ಎಂದು ಹಟ ಹಿಡಿದಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಇದೇ ರೀತಿಯ ಮನೋಭಾವ ಇರಲಿ ಎಂಬುದು ನನ್ನ ಭಾವನೆ' ಎಂದು ದೇವೇಗೌಡ ತಿಳಿಸಿದರು.

ಬಿಜೆಪಿಯ ಬಲ‌ ಕುಗ್ಗಿಸುವುದು‌ ಎರಡೂ ಪಕ್ಷಗಳ ಹೊಂದಾಣಿಕೆಯ ಉದ್ದೇಶ. ಯಾವುದೇ ವಿವಾದಗಳಿಗೆ ಆಸ್ಪದ‌ ಇಲ್ಲದಂತೆ ಸೀಟು ಹಂಚಿಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಹತ್ತು ದಿನಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ. ಸೋಮವಾರ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ ಎಂದರು.

‘ನಾನು ಎಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಮುಖ್ಯವಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಯಾವ ಪಕ್ಷಕ್ಕೆ ನೀಡಬೇಕು ಎಂಬುದರ ಬಗ್ಗೆಯೂ ತೀರ್ಮಾನ ಆಗಿಲ್ಲ. ಜೆಡಿಎಸ್‌ಗೆ ಹತ್ತು ಕ್ಷೇತ್ರ ಬಿಡಬೇಕು ಎಂದು ಎಂ.ವೀರಪ್ಪ ಮೊಯಿಲಿ ಅವರೇ ಹೇಳಿದ್ದಾರೆ. ಸೀಟು ಹಂಚಿಕೆ ಸುಲಭದ ಕೆಲಸ ಅಲ್ಲ. ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದಂತೆ ಈ ಪ್ರಕ್ರಿಯೆಯನ್ನು ಮುಗಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ನಿಖಿಲ್‌ ಸ್ಪರ್ಧೆ– ಎಚ್‌ಡಿಕೆ (ಶಿವಮೊಗ್ಗ ವರದಿ): ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದಲೇ ಸ್ಪರ್ಧಿಸುತ್ತಾರೆ. ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದರು.

‘ಯಾರೋ ಹೆದರಿಸುತ್ತಾರೆ ಎಂದು ನಮ್ಮ ಕುಟುಂಬ ಹೆದರುವುದಿಲ್ಲ. ಸುಮಲತಾ ಅವರು ನಮ್ಮ ಪಕ್ಷದವರಲ್ಲ. ಅವರ ಸ್ಪರ್ಧೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಕಾಂಗ್ರೆಸ್ ಕ್ಷೇತ್ರ ಬಿಟ್ಟುಕೊಟ್ಟಿದೆ. ನಿಖಿಲ್ ಬಯಸಿದರೆ ಅಲ್ಲಿಂದಲೇ ಸ್ಪರ್ಧಿಸುತ್ತಾರೆ. ಈ ಕುರಿತು ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದುಸ್ಪಷ್ಟಪಡಿಸಿದರು.

ಸೋಮವಾರ ನಡೆಯುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ,ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

‘ಮಂಡ್ಯದಲ್ಲಿ ಮನೆ ಮಾಡುವೆ’

ಮಂಡ್ಯ: ‘ಜೆಡಿಎಸ್‌ ವರಿಷ್ಠರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಹೆಸರು ಘೋಷಣೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ನಗರದಲ್ಲಿ ಮನೆ ಮಾಡಿ, ಕ್ಷೇತ್ರ ಪ್ರವಾಸ ಆರಂಭಿಸುತ್ತೇನೆ’ ಎಂದು ನಿಖಿಲ್‌ ಕುಮಾರಸ್ವಾಮಿ ಇಲ್ಲಿ ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಮಲತಾ ಅಕ್ಕನ ಸ್ಪರ್ಧೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ಸರ್ವ ಸ್ವತಂತ್ರರು. ಅಂಬರೀಷ್‌ ಅಂಕಲ್‌ ಬಗ್ಗೆ ಗೌರವ ಇದೆ. ಅಭಿಷೇಕ್‌ ನನ್ನ ತಮ್ಮ ಇದ್ದ ಹಾಗೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.