ADVERTISEMENT

ಶಾ ಪುಸ್ತಕ ಖರೀದಿಸಿದ ನಿರ್ಮಿತಿ ಕೇಂದ್ರ!

‘ಅಮಿತ್ ಶಾ ಅಂಡ್‌ ದಿ ಮಾರ್ಚ್‌ ಆಫ್ ಬಿಜೆಪಿ’ 500 ಪ್ರತಿಗಳ ಖರೀದಿ ವಿವಾದ

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಫೆಬ್ರುವರಿ 2020, 7:21 IST
Last Updated 18 ಫೆಬ್ರುವರಿ 2020, 7:21 IST
ಪುಸ್ತಕ ಖರೀದಿಯ ರಶೀದಿ
ಪುಸ್ತಕ ಖರೀದಿಯ ರಶೀದಿ   

ಧಾರವಾಡ: ಜನರ ಅನುಕೂಲಕ್ಕಾಗಿ ತ್ವರಿತ ನಿರ್ಮಾಣ ಕಾಮಗಾರಿಗಳನ್ನು ನಡೆಸಬೇಕಿರುವ ನಿರ್ಮಿತಿ ಕೇಂದ್ರವು, ಅಮಿತ್‌ ಶಾ ಹಾಗೂ ಬಿಜೆಪಿ ಕುರಿತಾದ 500 ಪುಸ್ತಕಗಳನ್ನು ಖರೀದಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕಾಗಿ ₹1.6 ಲಕ್ಷ ಖರ್ಚು ಮಾಡಲಾಗಿದೆ.

ಅನಿರ್ಬನ್ ಗಂಗೂಲಿ ಹಾಗೂ ಶಿವಾನಂದ ದ್ವಿವೇದಿ ಅವರು ಬರೆದಿರುವ ‘ಅಮಿತ್ ಶಾ ಅಂಡ್‌ ದಿ ಮಾರ್ಚ್‌ ಆಫ್ ಬಿಜೆಪಿ’ ಪುಸ್ತಕವು ಬ್ಲೂಮ್ಸ್‌ಬರ್ಗ್ ಪ್ರಕಾಶನ ಹೊರತಂದಿದೆ. ಇದರ 500 ಪ್ರತಿಗಳನ್ನು ‘ಸಪ್ನ ಪುಸ್ತಕ ಮಳಿಗೆ’ಯಿಂದ ಕಳೆದ ನ.30ರಂದು ಇಲ್ಲಿನ ನಿರ್ಮಿತಿ ಕೇಂದ್ರವು ಖರೀದಿಸಿದೆ.

₹399 ಮುಖಬೆಲೆಯ ಈ ಪುಸ್ತಕಕ್ಕೆ ಶೇ 20ರಷ್ಟು ರಿಯಾಯಿತಿಯನ್ನು ಸಪ್ನ ಮಳಿಗೆ ನೀಡಿ ₹1,59,600ಕ್ಕೆ ಪುಸ್ತಕಗಳನ್ನು ಮಾರಾಟ ಮಾಡಿದೆ. ಇದರ ರಶೀದಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹೆಸರಿನಲ್ಲಿದೆ. ಹಾಗೆಯೇ ನಿರ್ಮಿತಿ ಕೇಂದ್ರದ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಒಂದು ತಿಂಗಳ ಮೊದಲು ಅಕ್ಟೋಬರ್‌ 31ರಂದೇ ಸಪ್ನ ಪುಸ್ತಕ ಬುಕ್‌ ಹೌಸ್‌ನ ಫೆಡರಲ್‌ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗಿದೆ. ಖಾತೆಗೆ ₹25,005.90ರಂತೆ ಆರು ಬಾರಿ ಹಾಗೂ ಒಂದು ಬಾರಿ ₹9,605 ಹಣವನ್ನು ನೆಫ್ಟ್‌ ಮೂಲಕ ಸಂದಾಯ ಮಾಡಲಾಗಿದೆ.

ADVERTISEMENT

‘ಅಮಿತ್ ಶಾ ಅಂಡ್‌ ದಿ ಮಾರ್ಚ್‌ ಆಫ್ ಬಿಜೆಪಿ’ ಪುಸ್ತಕವು 2019ರ ಮೇ ತಿಂಗಳಲ್ಲಿ ಬಿಡುಗಡೆಗೊಂಡಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಸರ್ಕಾರ ಪತನಗೊಂಡು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪುಸ್ತಕಗಳ ಖರೀದಿ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶಿವಕುಮಾರ, ‘ಸಪ್ನ ಪುಸ್ತಕ ಮಳಿಗೆಯಿಂದ ಪುಸ್ತಕದ ರ‍್ಯಾಕ್‌ಗಳನ್ನು ಖರೀದಿಸಿದ್ದೇವೆ. ಆದರೆ ಅವರು ತಪ್ಪಾಗಿ ಪುಸ್ತಕ ಎಂದು ನಮೂದಿಸಿದ್ದಾರೆ. ಈ ಕುರಿತು ಮೌಖಿಕವಾಗಿ ಅವರಿಗೆ ತಿಳಿಸಲಾಗಿತ್ತು. ಕೇಂದ್ರದ ನಿಧಿಯಿಂದ ವಿವೇಚನಾಧಿಕಾರ ಬಳಸಿ ಹಣ ಪಾವತಿಸಲಾಗಿದೆ’ ಎಂದರು.

*
ನಿರ್ಮಿತಿ ಕೇಂದ್ರವು ಈ ಪುಸ್ತಕಗಳ ಖರೀದಿ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ವಿಚಾರಿಸಲಾಗುವುದು.
-ದೀಪಾ ಚೋಳನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.