ADVERTISEMENT

ನಿಜಾಮುದ್ದೀನ್ ಧಾರ್ಮಿಕ ಸಭೆಯಿಂದ ಮರಳಿದ್ದ ಬೀದರ್‌ನ 11 ಜನರಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 8:28 IST
Last Updated 2 ಏಪ್ರಿಲ್ 2020, 8:28 IST
ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ   

ಬೀದರ್: ‘ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬೀದರ್ ಜಿಲ್ಲೆಯ 26 ಜನರ ಪೈಕಿ 11 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಮೊದಲ ವರದಿಯಲ್ಲಿ ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ತಿಳಿಸಿದರು.

‘11 ಜನರ ಗಂಟಲು ಸ್ರಾವದ ವೈದ್ಯಕೀಯ ವರದಿ ಪಾಸಿಟಿವ್‌ ಬಂದಿದೆ. ಇನ್ನು ಎರಡು ಬಗೆಯ ವರದಿಗಳು ಬರಬೇಕಿದೆ. ಸಾಮಾನ್ಯವಾಗಿ ಮೊದಲ ಹಂತದಲ್ಲಿ ಪಾಸಿಟಿವ್ ಬಂದರೆ, ಎರಡು ಹಾಗೂ ಮೂರು ಹಂತದ ವರದಿಯಲ್ಲೂ ಪಾಸಿಟಿವ್‌ ಬರುತ್ತದೆ. ಎರಡು ವರದಿಗಳು ಸಂಜೆ ವೇಳೆಗೆ ಬರಲಿವೆ. ಹೀಗಾಗಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಬೀದರ್ ಜಿಲ್ಲೆಯ ಒಟ್ಟು 26 ಜನರು ಮಾರ್ಚ್‌ 10ಕ್ಕೆ ದೆಹಲಿಗೆ ತೆರಳಿ ತಬ್ಲೀಗ್‌ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾರ್ಚ್ 18 ರಂದು ಜಿಲ್ಲೆಗೆ ಮರಳಿದ್ದಾರೆ. ಎಲ್ಲರನ್ನೂ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರತ್ಯೇಕವಾದ ವಾರ್ಡ್‌ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಒಟ್ಟು ದೆಹಲಿಗೆ ಹೋಗಿ ಬಂದ 26, ವಿದೇಶದಿಂದ ಬಂದಿರುವ ಬೀದರ್‌ ತಾಲ್ಲೂಕಿನ ಕಪಲಾಪುರ ಒಬ್ಬರು ಹಾಗೂ ಕಲಬುರ್ಗಿಗೆ ತೆರಳಲುವ ಉದ್ದೇಶದಿಂದ ಹೈದರಾಬಾದ್‌ನಿಂದ ಬೀದರ್‌ಗೆ ಬಂದಿದ್ದ ಇನ್ನೊಬ್ಬರು ಸೇರಿ ಸೋಂಕು ಶಂಕಿತ 28 ಜನರ ಪೈಕಿ
ದೆಹಲಿಯಿಂದ ಬಂದ 16 ಜನರ ವೈದ್ಯಕೀಯ ವರದಿ ನೆಗೆಟಿವ್‌ ಇದೆ. ಬೀದರ್‌ ನಗರದ 9, ಬಸವಕಲ್ಯಾಣ ಹಾಗೂ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಹೇಳಿದರು.

‘ಸೋಂಕಿತರು ಮತ್ತೆ ಎಲ್ಲಿ ಎಲ್ಲಿ ಹೋಗಿ ಬಂದಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಸೋಂಕಿತ ವ್ಯಕ್ತಿಗಳ ಕುಟುಂಬದ 28 ಜನರನ್ನು ಓಲ್ಡ್‌ಸಿಟಿಯ ತಾಯಿ ಮಗು ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಇರಿಸಿ ಅವರ ಮೇಲೆ ನಿಗಾ ಇಡಲಾಗಿದೆ’ ಎಂದು ತಿಳಿಸಿದರು.

‘ಓಲ್ಡ್‌ಸಿಟಿಯ ಮೂರು ಕಿ.ಮೀ ಪ್ರದೇಶವನ್ನು ಸೋಂಕು ಹರಡಿದ ಪ್ರದೇಶವೆಂದು ಗುರುತಿಸಲಾಗಿದೆ. ಚೌಬಾರಾದಿಂದ 5 ಕಿ.ಮೀ ಅಂತರದ ಪ್ರದೇಶವನ್ನು ಬಫರ್‌ ವಲಯ ಎಂದು ಘೋಷಣೆ ಮಾಡಲಾಗಿದೆ. ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.