ADVERTISEMENT

ಎನ್‌ಎಲ್‌ಎಸ್‌ಐಯು: ರಾಜ್ಯದವರಿಗೆ ಶೇ 25 ಸೀಟು ಮೀಸಲು

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:32 IST
Last Updated 1 ಜುಲೈ 2021, 21:32 IST

ಬೆಂಗಳೂರು: ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯು (ಎನ್‌ಎಲ್‌ಎಸ್‌ಐಯು) ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಶೇ 25ರಷ್ಟು ಸೀಟುಗಳನ್ನು ಮೀಸಲು ಇರಿಸಿದೆ. ಬೆಂಗಳೂರಿನಲ್ಲಿರುವ ಈ ವಿಶ್ವವಿದ್ಯಾಲಯವು ಸ್ಥಳೀಯ ಕೋಟಾದಡಿ ಈ ಮೀಸಲಾತಿಯನ್ನು ನೀಡಿದೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಓದಿದವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು. 2021–22ನೇ ಶೈಕ್ಷಣಿಕ ವರ್ಷದಲ್ಲಿ ಬಿಎ, ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂಗೆ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಈ ಸೌಲಭ್ಯ ಸಿಗಬೇಕೆಂದರೆ, ಅಭ್ಯರ್ಥಿಗಳು ಕ್ಲ್ಯಾಟ್‌ 2021ರ (ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ) ಅರ್ಜಿಯನ್ನು ಪರಿಷ್ಕರಿಸಿ, ಕರ್ನಾಟಕದ ವಿದ್ಯಾರ್ಥಿ ಎಂಬ ಮಾಹಿತಿಯನ್ನು ಭರ್ತಿ ಮಾಡಬೇಕು ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ನೀಡಿದ ವ್ಯಾಸಂಗ ಪ್ರಮಾಣ ಪತ್ರವನ್ನು ಕೌನ್ಸೆಲಿಂಗ್‌ ಅಥವಾ ಪ್ರವೇಶ ಪ್ರಕ್ರಿಯೆ ವೇಳೆ ಸಲ್ಲಿಸಬೇಕು ಎಂದೂ ವಿಶ್ವವಿದ್ಯಾಲಯವು ಹೇಳಿದೆ.

ADVERTISEMENT

‘ಎನ್‌ಎಲ್‌ಎಸ್‌ಐಯು ಸೇರ್ಪಡೆ ಮತ್ತು ವಿಸ್ತರಣೆ ಯೋಜನೆ 2021–24’ರ ಅಡಿ ವಿಶ್ವವಿದ್ಯಾಲಯವು ಸ್ಥಳೀಯ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ನೀಡಿದೆ. ಇದರನ್ವಯ, 2021–22ನೇ ಸಾಲಿನಲ್ಲಿ, ಬಿಎ ಎಲ್‌ಬಿ ಪದವಿ ಪ್ರವೇಶಕ್ಕೆ ರಾಜ್ಯದ 30 ವಿದ್ಯಾರ್ಥಿಗಳಿಗೆ, ಎಲ್‌ಎಲ್‌ಎಂ ಪದವಿಗೆ 13 ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗಲಿದೆ.

ಸರ್ಕಾರದ ಪ್ರಯತ್ನಕ್ಕೆ ಸಂದ ಫಲ:ರಾಜ್ಯದ ವಿದ್ಯಾರ್ಥಿಗಳ ಹಿತ ಕಾಪಾಡುವ ಮತ್ತು ಕನ್ನಡಿಗ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಈ ವಿದ್ಯಾಲಯಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಿದ್ದೂ ಅಲ್ಲದೆ, ಅನುದಾನ ನೀಡುತ್ತಲೇ ಬಂದಿತ್ತು. ಆದರೆ, ಕರ್ನಾಟಕದ ಕಾನೂನು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಆಗಿರಲಿಲ್ಲ. ಇತರ ರಾಜ್ಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗಿತ್ತು ಎಂದು ಹಿಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.