ADVERTISEMENT

ಮುನಿರತ್ನ ವಿರುದ್ಧ ಬಲವಂತದ ಕ್ರಮ ಇಲ್ಲ: ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:52 IST
Last Updated 10 ಜೂನ್ 2025, 15:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮಧ್ಯವಯಸ್ಸಿನ ಮಹಿಳೆಯೊಬ್ಬರ ಮೇಲೆ ತನ್ನ ಸಹಚರರಿಂದ ಕಣ್ಣೆದುರೇ ಅತ್ಯಾಚಾರ ಮಾಡಿಸಿದ ಆರೋಪ ಹೊತ್ತ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ನ್ಯಾಯಾಲಯದ ಅನುಮತಿ ಇಲ್ಲದೇ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಆದೇಶವನ್ನು ಪ್ರಶ್ನಿಸಿ ಮುನಿರತ್ನ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅವರು, ‘ಮುನಿರತ್ನ ವಿರುದ್ಧ ಬೇರೆ ಬೇರೆ 16 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಇದೊಂದು ಗುರುತರ ಆಪಾದನೆಯ ಪ್ರಕರಣ. ಹಾಗಾಗಿ, ಇದರಲ್ಲಿ ಅವರು ಮತ್ತು ಇತರ ಆರೋಪಿಗಳನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸುವ ಅಗತ್ಯವಿದೆ. ಆರೋಪಿ ಅತ್ಯಂತ ಪ್ರಭಾವಿ ಜನಪ್ರತಿನಿಧಿಯಾಗಿದ್ದು, ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಮುನಿರತ್ನ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಅರ್ಜಿದಾರರು ತನಿಖೆಗೆ ಸಹಕರಿಸುತ್ತಾರೆ. ಆದ್ದರಿಂದ, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರು ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಸಿ.ಎಸ್‌.ಪ್ರದೀಪ್‌ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತು. ಹೈಕೋರ್ಟ್‌ ವಕೀಲ ಎಸ್‌.ಎಸ್.ಶ್ರೀನಿವಾಸ ರಾವ್‌ ಮುನಿರತ್ನ ಪರ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.