ಎಂ.ಬಿ. ಪಾಟೀಲ
ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಜಾತಿಗಣತಿ ವರದಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವ ಗೊಂದಲವೂ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ಸೋಮವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೂಡ ಸುರ್ಜೇವಾಲಾ ಇದನ್ನೇ ಸ್ಪಷ್ಟವಾಗಿ ಹೇಳಿದ್ದಾರೆ. ಸಚಿವರಾದ ಜಿ. ಪರಮೇಶ್ವರ ಮತ್ತು ಕೆ.ಎನ್. ರಾಜಣ್ಣ ಅವರು ಕಾರಣಾಂತರಗಳಿಂದ ಕೆಪಿಸಿಸಿ ಸರ್ವಸದಸ್ಯರ ಸಭೆಗೆ ಬಂದಿರಲಿಲ್ಲ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬೆಳಗಾವಿ ಜಿಲ್ಲೆಯ ರಾಜಕಾರಣ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಸತೀಶ ಜಾರಕಿಹೊಳಿ ಮಧ್ಯೆ ಯಾವ ಜಗಳವೂ ಆಗಿಲ್ಲ’ ಎಂದರು.
‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ನಾನು ಕಣ್ಣಿಟ್ಟಿಲ್ಲ. ಕೈಗಾರಿಕಾ ಸಚಿವನಾಗಿ ನಾನು ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ರಾಜಕೀಯದಲ್ಲಿ ನನಗೆ ಸಹಜವಾದ ಆಸೆ ಇದೆಯೇ ವಿನಾ ದುರಾಸೆಯಂತೂ ಇಲ್ಲ’ ಎಂದರು.
‘ಗುತ್ತಿಗೆದಾರರ ₹30 ಸಾವಿರ ಕೋಟಿ ಬಿಲ್ ಪಾವತಿ ನನೆಗುದಿಗೆ ಬೀಳಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಯಾವ ಅನುಮೋದನೆಯೂ ಇಲ್ಲದೆ ಬಿಜೆಪಿಯವರು ₹2 ಲಕ್ಷ ಕೋಟಿ ಮೊತ್ತದ ಗುತ್ತಿಗೆ ಕಾಮಗಾರಿ ನೀಡಿದ್ದರು. ಹೀಗಾಗಿ, ₹35 ಸಾವಿರ ಕೋಟಿ ಪಾವತಿಯೇ ಆಗಿರಲಿಲ್ಲ. ಆ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ’ ಎಂದು ವಿವರಿಸಿದರು.
‘ವೀರಶೈವ ಮಹಾಸಭಾಕ್ಕೆ ವಿರೋಧಿಸುವ ಹಕ್ಕಿದೆ’
‘ಲಿಂಗಾಯತರಲ್ಲಿರುವ ಬೇರೆ ಬೇರೆ ಉಪಪಂಗಡಗಳು ಜಾತಿಗಣತಿಯ ವರದಿಯಲ್ಲಿ ಬೇರೆ ಬೇರೆ ರೀತಿ ನಮೂದಿಸಿವೆ. ಈ ವರದಿಯನ್ನು ವೀರಶೈವ ಮಹಾಸಭಾ ವಿರೋಧಿಸುತ್ತಿದ್ದರೆ ಅಂತಹ ಹಕ್ಕು ಅದಕ್ಕಿದೆ’ ಎಂದು ಎಂ.ಬಿ. ಪಾಟೀಲ ಸಮರ್ಥನೆ ನೀಡಿದರು.
‘ಜಾತಿಗಣತಿ ವರದಿಯನ್ನು ನಾನು ಯಾವತ್ತೂ ವಿರೋಧಿಸಿಲ್ಲ. ಆದರೆ ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದು ಹೇಳುತ್ತಾ ಬಂದಿದ್ದೇನೆ. ಇಷ್ಟಕ್ಕೂ ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಯಾರೂ ನೋಡಿಲ್ಲ. ಆದರೆ ಸುರ್ಜೇವಾಲಾ ಕೂಡ ಯಾವೊಂದು ಸಮುದಾಯಕ್ಕೂ ನೋವು ಆಗದಂತೆ ನಾವು ನಡೆದುಕೊಳ್ಳಬೇಕು ಎಂದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.