ADVERTISEMENT

ಹೆದ್ದಾರಿ ಬದಿ ಕಟ್ಟಡಗಳಿಗೆ ಅನುಮತಿ: ಹೈಕೋರ್ಟ್‌ ಗರಂ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 16:34 IST
Last Updated 13 ಸೆಪ್ಟೆಂಬರ್ 2021, 16:34 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಿಂದ ನಿಗದಿತ ದೂರದ ತನಕ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಹೈಕೋರ್ಟ್ ನಿರ್ದೇಶನ ನೀಡಿದೆ. ‌‌‌ಅನುಮತಿ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದೆ.

ಕರ್ನಾಟಕ ಹೆದ್ದಾರಿ ಕಾಯ್ದೆ ಮತ್ತು 2005ರಲ್ಲಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಕಡೆಗೆ 40 ಮೀಟರ್‌, ಜಿಲ್ಲಾ ಮುಖ್ಯ ರಸ್ತೆಗಳ ಮಧ್ಯದಿಂದ 25 ಮೀಟರ್‌ ತನಕ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ.

ಈ ನಿಯಮ ಉಲ್ಲಂಘಿಸಿ ಉಡುಪಿ ಜಿಲ್ಲೆಯ ಕಾಪು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಿಸಿದ್ದ ಕಟ್ಟಡ ನೆಲಸಮಕ್ಕೆ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಇತ್ತೀಚೆಗೆ ಆದೇಶ ಹೊರಡಿಸಿತ್ತು. 1999ರ ಡಿಸೆಂಬರ್‌ನಲ್ಲಿ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪೀಠ ಉಲ್ಲೇಖಿಸಿತ್ತು. ಈ ಆದೇಶವನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ರವಾನಿಸುವಂತೆ ಸರ್ಕಾರದ ಪರ ವಕೀಲರಿಗೆ ಪೀಠ ಸೋಮವಾರ ಸೂಚಿಸಿತು.

ADVERTISEMENT

‘ಈ ಪ್ರಕರಣದಲ್ಲಿ ಅನುಮತಿ ನೀಡಿರುವ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿ ಮಾಡಲು ಸತ್ಯ ಶೋಧನಾ ಸಮಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ರಚಿಸಬೇಕು. ಅನುಮತಿ ನೀಡಿದವರ ವಿರುದ್ಧ ಎರಡು ತಿಂಗಳಲ್ಲಿ ಇಲಾಖಾ ತನಿಖೆ ನಡೆಸಬೇಕು. ಕಾನೂನಿನಲ್ಲಿ ಅವಕಾಶ ಇದ್ದರೆ ಕ್ರಿಮಿನಲ್ ಪ್ರಕ್ರಿಯೆಯನ್ನೂ ಆರಂಭಿಸಬೇಕು’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.