ADVERTISEMENT

ಚಿಕ್ಕಮಗಳೂರಿಗೆ ಪ್ರತ್ಯೇಕ ಡೇರಿ ಇಲ್ಲ:ಸಚಿವ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 16:21 IST
Last Updated 21 ಜುಲೈ 2023, 16:21 IST
   

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯನ್ನು ಹಾಸನ ಹಾಲು ಒಕ್ಕೂಟದಿಂದ ಪ್ರತ್ಯೇಕಿಸಲು ನಿರಾಕ್ಷೇಪಣಾ ಪತ್ರ ನೀಡಲು ಸಾಧ್ಯವಿಲ್ಲ. ಚಿಕ್ಕಮಗಳೂರಿನಲ್ಲಿ ಹಾಲಿನ ಡೇರಿ ಸ್ಥಾಪಿಸುವುದು ಕಾರ್ಯಸಾಧುವೂ ಅಲ್ಲ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಕಾಂಗ್ರೆಸ್‌ನ ಎಚ್‌.ಡಿ.ತಮ್ಮಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ನಿರಾಕ್ಷೇಪಣಾ ಪತ್ರವನ್ನು ರಾಜ್ಯ ಸರ್ಕಾರ ನೀಡುವುದಿಲ್ಲ. ಎನ್‌ಡಿಡಿಬಿಯೇ ನೀಡಬೇಕು. ಅವರು ಕೊಟ್ಟರೆ ಮಾತ್ರ ಪ್ರತ್ಯೇಕಿಸಲು ಸಾಧ್ಯ ಎಂದರು.

ಹಾಸನದಲ್ಲಿ ಮೆಗಾ ಡೇರಿ ಸ್ಥಾಪಿಸಲು ಎನ್‌ಡಿಡಿಬಿ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆ ಸೇರಿಸಿ ಸಮೀಕ್ಷೆ ನಡೆಸಿ ಬಳಿಕ ₹350 ಕೋಟಿ ಸಾಲ ನೀಡಿತ್ತು. ಹಾಸನ ಮೆಗಾಡೇರಿಗೆ ಮೂರು ಜಿಲ್ಲೆಗಳಿಂದ ಪ್ರತಿ ನಿತ್ಯ 10.50 ಲಕ್ಷ ಲೀಟರ್‌ ಹಾಲು ಬರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ಪಾದನೆ ಆಗುವುದು ಕೇವಲ 1.18 ಲಕ್ಷ ಲೀಟರ್‌ ಮಾತ್ರ. ಹಾಸನ ಜಿಲ್ಲೆಯೊಂದರಲ್ಲೇ 9 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತದೆ ಎಂದು ರಾಜಣ್ಣ ಹೇಳಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ತಮ್ಮಯ್ಯ, ‘ನೀವು ಹೇಳುವ ಮಾಹಿತಿ ತಪ್ಪು. ಚಿಕ್ಕಮಗಳೂರು ಜಿಲ್ಲೆಯಲ್ಲಿ 2.50 ಲಕ್ಷ ಲೀಟರ್‌ ಉತ್ಪಾದನೆ ಆಗುತ್ತದೆ. ಸುಮಾರು 2 ಲಕ್ಷ ಲೀಟರ್‌ ಹಾಲನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ. ಹಾಸನದವರ ರಾಜಕೀಯದಿಂದ ಪ್ರತ್ಯೇಕಿಸುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜಣ್ಣ, ‘ನಿಮ್ಮ ಮಾಹಿತಿಯೇ ಸರಿ ಇಲ್ಲ. ಚಿಕ್ಕಮಗಳೂರಿನಲ್ಲಿ 1.18 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲು ಉತ್ಪಾದನೆ ಆಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.