ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ: ಸಣ್ಣ ವಾಹನಗಳಿಗಿಲ್ಲ ಪ್ರವೇಶ

ದ್ವಿಚಕ್ರ, ಟ್ರ್ಯಾಕ್ಟರ್‌ಗಳಿಗೆ ಸರ್ವಿಸ್‌ ರಸ್ತೆ ಮಾತ್ರ ಬಳಕೆಗೆ ಪ್ರಸ್ತಾವ

ಆರ್.ಜಿತೇಂದ್ರ
Published 13 ಸೆಪ್ಟೆಂಬರ್ 2021, 19:22 IST
Last Updated 13 ಸೆಪ್ಟೆಂಬರ್ 2021, 19:22 IST
ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮೈಸೂರು ಹೆದ್ದಾರಿ
ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮೈಸೂರು ಹೆದ್ದಾರಿ   

ರಾಮನಗರ: ದಶಪಥವಾಗಿ ನಿರ್ಮಾಣ ಆಗುತ್ತಿರುವ ಬೆಂಗಳೂರು–ಮೈಸೂರು ಹೆದ್ದಾರಿಯ ‘ಎಕ್ಸ್‌ಪ್ರೆಸ್‌ ವೇ’ಯಲ್ಲಿ ವೇಗದ ವಾಹನಗಳ ಓಡಾಟಕ್ಕೆ ಮಾತ್ರವೇ ಅನುಮತಿ ಇರಲಿದೆ. ದ್ವಿಚಕ್ರ, ಆಟೊ, ಟ್ರ್ಯಾಕ್ಟರ್‌ನಂತಹ ವಾಹನಗಳಿಗೆ ಸರ್ವೀಸ್‌ ರಸ್ತೆ ಮಾತ್ರ ಸಿಗಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಹತ್ತು ಪಥದ ರಸ್ತೆ ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಆರು ಪಥದ ‘ಎಕ್ಸ್‌ಪ್ರೆಸ್‌ ವೇ’ ಮತ್ತು ಅದರ ಎಡಬಲದಲ್ಲಿ ತಲಾ ಎರಡು ಪಥಗಳ ಸರ್ವೀಸ್‌ ರಸ್ತೆ ನಿರ್ಮಾಣ ಆಗುತ್ತಿದೆ. ಆರು ಪಥದ ವಿಶೇಷ ರಸ್ತೆಗೆ ಟೋಲ್ ಸುಂಕ ಇರಲಿದ್ದು, ಮೈಸೂರು–ಬೆಂಗಳೂರು ನಡುವಿನ ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಯಲಿದೆ.

ಈ ವಿಶೇಷ ಪಥದಲ್ಲಿ ಸಂಚರಿಸುವ ವಾಹನಗಳ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಈ ಹಾದಿಯಲ್ಲಿ ದ್ವಿಚಕ್ರ ಮತ್ತಿತರ ಸಣ್ಣ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲು ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿದೆ. ಇದಕ್ಕೆ ಒಪ್ಪಿಗೆ ದೊರೆತಲ್ಲಿ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಗೆ ಬರುವ ಮೊದಲ ರಾಷ್ಟ್ರೀಯ ಹೆದ್ದಾರಿ ಇದಾಗಲಿದೆ.

ADVERTISEMENT

ಅನುಕೂಲಗಳೇನು?: ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ಓಡಾಟಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಇದರ ಮಧ್ಯೆ ಬೈಕ್‌, ಆಟೊ ಮೊದಲಾದ ವಾಹನಗಳ ಓಡಾಟ ಹೆಚ್ಚಾದಲ್ಲಿ ಅದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಉಳಿದ ವಾಹನಗಳ ವೇಗಕ್ಕೂ ಅಡ್ಡಿಯಾಗುತ್ತದೆ. ಹೀಗಾಗಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸರ್ವೀಸ್‌ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಅಪಘಾತ ಕಡಿಮೆ
ಯಾಗುವ ಜತೆಗೆ ಸ್ಥಳೀಯ ವಾಹನಗಳಿಗೆ ಟೋಲ್‌ ಸುಂಕವೂ ತಪ್ಪುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ಆದರೆ, ಈ ನಿರ್ಧಾರದಿಂದ ಮೈಸೂರು–ಬೆಂಗಳೂರು ನಡುವೆ ಬೈಕ್‌ನಲ್ಲಿ ಓಡಾಡುವವರಿಗೆ ನಿರಾಸೆ ಆಗಲಿದೆ. ಅವರು ಈ ಮೊದಲಿನಂತೆಯೇ ಎರಡು ಪಥದ ಹಾದಿಯಲ್ಲಿಯೇ ಓಡಾಡಬೇಕಿದ್ದು, ಪ್ರಯಾಣದ ಸಮಯವೂ ಎಂದಿನಂತೆಯೇ ಇರಲಿದೆ.

***

ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್‌, ಟ್ರ್ಯಾಕ್ಟರ್‌ ಮೊದಲಾದ ವಾಹನಗಳಿಗೆ ಸರ್ವೀಸ್‌ ರಸ್ತೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು ಅನುಮತಿ ಪಡೆಯಲಾಗುವುದು.

-ಶ್ರೀಧರ್, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.