ADVERTISEMENT

ಕೊಡಗಿನ ಕೂಗಿಗೆ ಸಿಗದ ಮನ್ನಣೆ

ಲೋಕಸಭಾ ಕ್ಷೇತ್ರ: ಬಹುತೇಕ ಹೊರಗಿನವರಿಗೇ ಪ್ರಾಶಸ್ತ್ಯ

ಅದಿತ್ಯ ಕೆ.ಎ.
Published 15 ಮಾರ್ಚ್ 2019, 20:00 IST
Last Updated 15 ಮಾರ್ಚ್ 2019, 20:00 IST
   

ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರವಿಲ್ಲ. ಮೈಸೂರು ಜಿಲ್ಲೆಯೊಂದಿಗೆ ವಿಲೀನವಾಗಿದೆ. ಬಹಳ ಹಿಂದೆಯೇ ಕ್ಷೇತ್ರ ಕಳೆದುಕೊಂಡಿರುವ ಜಿಲ್ಲೆಯ ಜನರು, ಸ್ಥಳೀಯ ಅಭ್ಯರ್ಥಿಗಾದರೂ ಟಿಕೆಟ್‌ ನೀಡಬೇಕು ಎಂದು ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಜಿಲ್ಲೆಯ ಜನರ ಬಹುದಿನಗಳ ಕನಸು ಈ ಚುನಾವಣೆಯಲ್ಲೂ ಈಡೇರುವುದು ಕಷ್ಟ ಎಂಬ ಮಾತು ಕೇಳಿಬರುತ್ತಿವೆ.

ಮೂರು ತಾಲ್ಲೂಕು, ಎರಡು ವಿಧಾನಸಭಾ ಕ್ಷೇತ್ರಗಳನ್ನು ಜಿಲ್ಲೆ ಒಳಗೊಂಡಿದೆ. ಫೆಬ್ರುವರಿಯಲ್ಲಿ ಮತ್ತೆರಡು ತಾಲ್ಲೂಕು (ಕುಶಾಲನಗರ, ಪೊನ್ನಂಪೇಟೆ) ಘೋಷಣೆ ಮಾಡಿದ್ದರೂ ಇನ್ನೂ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. 4.35 ಲಕ್ಷ ಮತದಾರರು ಜಿಲ್ಲೆಯಲ್ಲಿದ್ದಾರೆ. ಬಹು ಕಾಲದಿಂದಲೂ ಹೊರಗಿನ ಅಭ್ಯರ್ಥಿಗಳೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಜನರು ನೋವು ತೋಡಿಕೊಳ್ಳುತ್ತಿದ್ದಾರೆ.

1967ರ ಚುನಾವಣೆಯಲ್ಲಿ ಕೊಡಗಿನ ಸಿ.ಎಂ.ಪೂಣಚ್ಚ ಗೆದ್ದಿದ್ದರು.1973ರಲ್ಲಿ ಮತ್ತೆ ಸ್ಪರ್ಧಿಸಿ ಸೋತಿ
ದ್ದರು. ಕೊಡಗು ಜಿಲ್ಲೆಯು ಮೈಸೂರಿನ ಏಕೀಕೃತ ಭಾಗವಾದ ನಂತರ ಜಯ ಗಳಿಸಿದ್ದ ಏಕಮಾತ್ರ ಸಂಸದರೆಂದರೆ ಪೂಣಚ್ಚ. ‘ಸಿ’ ರಾಜ್ಯದ ಸ್ಥಾನಮಾನವಿದ್ದಾಗ ಪೂಣಚ್ಚ ಕೊಡಗಿನ ಮುಖ್ಯಮಂತ್ರಿ ಆಗಿದ್ದರು. ಪೂಣಚ್ಚ ಬಳಿಕ ಜಿಲ್ಲೆಯ ಯಾರೊಬ್ಬರೂ ಸಂಸದರಾಗಿಲ್ಲ. ಮಾಜಿ ಸಚಿವ ಬಿ.ಎ.ಜೀವಿಜಯ ಸ್ಪರ್ಧಿಸಿದ್ದರೂ ಗೆದ್ದಿಲ್ಲ.

ADVERTISEMENT

ಈ ಬಾರಿಯ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ, ಕಾಂಗ್ರೆಸ್‌ನಲ್ಲಿ ಸ್ಥಳೀಯ ಅಭ್ಯರ್ಥಿಗೇ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಕಾಂಗ್ರೆಸ್‌ ಮುಖಂಡರು, ಬೆಂಗಳೂರಿಗೆ ನಿಯೋಗ ತೆರಳಿ ಜಿಲ್ಲೆಯ ಅಭ್ಯರ್ಥಿ ಪರಿಗಣಿಸಲು ಮನವಿ ಮಾಡಿದ್ದರು. ಮಡಿಕೇರಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ‘ಲೋಕಸಭಾ ಚುನಾವಣೆಯಲ್ಲಿಮೈಸೂರು ಭಾಗದವರಿಗೇಸ್ಪರ್ಧಿಸಲು ಅವಕಾಶ ಸಿಗುತ್ತಿದೆ. ಕೊಡಗಿನವರಿಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿರುವೆ. ಸ್ಪರ್ಧೆಗೆನಾನೂ ಸಿದ್ಧನಿದ್ದೇನೆ’ ಎಂದು ಗುಡುಗಿದ್ದರು.

ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಕಾಣಿಸಿಕೊಂಡಿದ್ದರು. ‘ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗುತ್ತಿದೆ’ ಎಂಬ ಹೈಕಮಾಂಡ್‌ ಮಾತಿನಿಂದ ಇಬ್ಬರೂ ಆಸೆ ಕೈಬಿಟ್ಟಿದ್ದಾರೆ.

ಮೈತ್ರಿಯಿಂದಾಗಿ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆಗೆ ಅವಕಾಶದ ಸಿಕ್ಕಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಜಿಲ್ಲೆಯ ಬ್ರಿಜೇಶ್‌ ಕಾಳಪ್ಪ ಹೆಸರು ಮಾತ್ರ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಉಂಟಾಗಿದ್ದ ಗೊಂದಲದಿಂದ ಅವರಿಗೆ ಟಿಕೆಟ್‌ ನೀಡಿದರೆ ವಿರೋಧಿಸುವುದಾಗಿ ಕಾಂಗ್ರೆಸ್‌ನ ಒಂದು ಬಣ ಹೇಳಿತ್ತು. ಹೀಗಾಗಿ, ಕಾಂಗ್ರೆಸ್‌ ಮುಖಂಡರು ಕೊಡಗಿನ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವ ವಿಚಾರದಲ್ಲಿ ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.