
ಬೆಂಗಳೂರು: ‘ರೈತನಿಲ್ಲ ಎಂದರೆ ಸಕ್ಕರೆ ಕಾರ್ಖಾನೆಯಾಗಲೀ ಅಥವಾ ಅವುಗಳ ಮಾಲೀಕರಾಗಲೀ ಯಾರೂ ಇರುವುದಿಲ್ಲ’ ಎಂದು ಹೈಕೋರ್ಟ್, ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡೆಗೆ ತೀವ್ರ ಅಸಹನೆ ವ್ಯಕ್ತಪಡಿಸಿದೆ.
‘ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ನಿಗದಿಪಡಿಸಿ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ನವೆಂಬರ್ 8ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ‘ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ ಕಾರ್ಯದರ್ಶಿ ಎಲ್.ಸೋಮೇಶ್ ಸೇರಿದಂತೆ ಆರು ಸಕ್ಕರೆ ಕಾರ್ಖಾನೆಗಳ ಪರವಾಗಿ ಸಲ್ಲಿಸಲಾಗಿರುವ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ರೈತರ ಆಂದೋಲನಕ್ಕೆ ಮಣಿದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನವೆಂಬರ್ 7ರಂದು ರಾಜ್ಯದ ಸಕ್ಕರೆ ಉತ್ಪಾದನಾ ಘಟಕಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ, ಪ್ರತಿ ಟನ್ ಕಬ್ಬಿಗೆ ₹3,250 ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದ್ದಾರೆ’ ಎಂದರು.
‘ಕಟಾವು ಮತ್ತು ಸಾಗಣೆ ಶುಲ್ಕ ₹900 ಸೇರಿದರೆ ಪ್ರತಿ ಟನ್‌ಗೆ ₹4,150 ತಗಲುತ್ತದೆ. ಸರ್ಕಾರ ಘೋಷಿಸಿರುವಂತೆ ಕಬ್ಬಿಗೆ ಬೆಲೆ ಪಾವತಿಸಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಪದೇ ಪದೇ ಮನವಿ ಮಾಡಿದರೂ ಮುಖ್ಯಮಂತ್ರಿ ಪರಿಗಣಿಸಿಲ್ಲ’ ಎಂದು ದೂರಿದರು.
‘ಸಕ್ಕರೆ ಉದ್ಯಮ ಈಗಾಗಲೇ ಕೆಟ್ಟ ಪರಿಸ್ಥಿತಿಯಲ್ಲಿದೆ. ಸರ್ಕಾರ ನಿಗದಪಡಿಸಿರುವ ಬೆಲೆ ಪಾವತಿಸಿದರೆ ಉದ್ಯಮಕ್ಕೆ ಭಾರಿ ನಷ್ಟವುಂಟಾಗುತ್ತದೆ. ಮೇಲಾಗಿ, ರಾಜ್ಯ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ 2025-26ನೇ ಸಾಲಿಗೆ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸಿರುವ ₹3,550 ಎಫ್‌ಆರ್‌ಪಿಗಿಂತ ಹೆಚ್ಚಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಆದ್ದರಿಂದ, ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೀವು ಕಬ್ಬು ಬಳಸಿಕೊಂಡು ಸಕ್ಕರೆ ಉತ್ಪಾದಿಸುತ್ತೀರಿ. ಎಥೆನಾಲ್ ಮತ್ತು ವಿದ್ಯುತ್ ಬಳಕೆಗೆ ಪರಿವರ್ತಿಸುತ್ತೀರಿ. ಏನೆಲ್ಲಾ ಮಾಡಿ ಹಣ ಸಂಪಾದಿಸುತ್ತೀರಿ. ಆದರೆ, ಲಾಭದ ಹಣವನ್ನು ಮಾತ್ರ ರೈತರ ಜೊತೆ ಸಮಾಧಾನಕರವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ’ ಎಂದು ಕಿಡಿ ಕಾರಿತು.
‘ಸರ್ಕಾರದ ಪರ ವಕೀಲರ ವಾದವನ್ನು ಆಲಿಸುವ ಮೊದಲೇ ನಿಮ್ಮ ಮನವಿಯ ಅನುಸಾರ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ’ ಎಂದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ, ಕಬ್ಬು ನಿಯಂತ್ರಣ ಮಂಡಳಿ ಮತ್ತು ಕಬ್ಬು ಅಭಿವೃದ್ಧಿ ಆಯಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.