
ಬೆಂಗಳೂರು: ‘ರಾಜ್ಯದಲ್ಲಿ ಬಡ ಮತ್ತು ಅನಾಥ ಮಕ್ಕಳು ಹೊಟ್ಟೆಗೆ ಅನ್ನವಿಲ್ಲದೆ ಉಪವಾಸದಿಂದ ಸಾಯುವ ಸ್ಥಿತಿ ಬಂದಿದೆ. ಆದರೆ, ಕಾಂಗ್ರೆಸ್ ಶಾಸಕರಿಗೆ ಅನ್ನ ಜಾಸ್ತಿಯಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಕೋವಿಡ್ ಸಮಯದಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ 26,334 ಮಕ್ಕಳನ್ನು ಸಲಹಲಾಗುತ್ತಿದೆ. ಈ ಮಕ್ಕಳ ಊಟ ವ್ಯವಸ್ಥೆಗಾಗಿ ನೀಡಬೇಕಿರುವ ₹75 ಕೋಟಿ ಕಳೆದ ಏಳು ತಿಂಗಳಿಂದ ಬಿಡುಗಡೆ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಷ್ಟೇ ಅಲ್ಲ ಗೃಹಲಕ್ಷ್ಮಿ ಯೋಜನೆಯ ₹5000 ಕೋಟಿ, ಅನ್ನಭಾಗ್ಯದ ₹750 ಕೋಟಿಗೆ ನಾಮ ಹಾಕಿದ್ದು, ಅನಾಥ ಮಕ್ಕಳ ಹಣವನ್ನೂ ನುಂಗಿ ಹಾಕಿದ್ದಾರೆ ಎಂದು ಕಿಡಿಕಾರಿದರು.
‘ಕಳೆದ ಬಜೆಟ್‌ನಲ್ಲಿ ಮೀಸಲಾದ ಹಣವನ್ನೇ ಯೋಜನೆಗಳಿಗೆ ನೀಡಿಲ್ಲ. ಈಗ ಹೊಸ ಬಜೆಟ್ ಮಾಡಲು ತಯಾರಿ ನಡೆಸಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ನಾನು ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೊ, ಲಾಭವಿತ್ತೊ ಎಂಬ ಮಾಹಿತಿ ಬಿಡುಗಡೆ ಮಾಡಲಿ. ಶಾಲಾ ಮಕ್ಕಳಿಗೆ ಬಸ್ ಸಿಗದೇ ಟಿಪ್ಪರ್‌ನಲ್ಲಿ ಹೋಗುತ್ತಿದ್ದಾರೆ’ ಎಂದರು.
ಗುತ್ತಿಗೆಗಳು ಆಂಧ್ರದ ಪಾಲು: ‘ಗುತ್ತಿಗೆ ದಾರರ ಸಂಘದವರು ಬಿಲ್ ಕೇಳಿದರೆ ನಾಳೆ ಬಾ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಸಚಿವರು ದೊಡ್ಡ ಪ್ಯಾಕೇಜ್ ಮಾಡಿ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಅವರಿಂದ ಕಮಿಷನ್ ಪಡೆಯುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಕಾಮಗಾರಿ ಗಳನ್ನು ತೆಲಂಗಾಣಕ್ಕೆ ನೀಡಿದ್ದಾರೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ’ ಎಂದರು
‘ಕಸ ವಿಲೇವಾರಿಯ ಟೆಂಡರ್ ಪಡೆಯಲು ಶೇ 7, ಬಿಲ್ ಪಡೆಯಲು ಶೇ7, ಎನ್‌ಒಸಿಗೆ ಶೇ 7 ಕಮಿಷನ್ ಕೊಡಬೇಕು. ಶೇ 21 ಕಮಿಷನ್ ನೀಡಿದರೆ ಮಾತ್ರ ಕೆಲಸ ಆಗುತ್ತದೆ. ಬೆಂಗಳೂರಿನ ಕಸ ವಿಲೇವಾರಿಯಲ್ಲಿ ಆಂಧ್ರದ ಮಾಫಿಯಾ ಇದೆ. ತಮಗೆ ಕಸದ ಟೆಂಡರ್ ಸಿಕ್ಕಿಲ್ಲ ಎಂದು ಬೆಂಗಳೂರು ಗುತ್ತಿಗೆದಾರರ ಸಂಘ ಹೇಳಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.